ನಾವು ಮಕ್ಕಳ ಭವಿಷ್ಯ ನಿರ್ಧರಿಸಬಾರದು : ಪ್ರಕಾಶ್ ರಾಜ್
ಮೈಸೂರು : ಮಕ್ಕಳ ಹಾರುವ ರೆಕ್ಕೆಗಳಿಗೆ ಶಕ್ತಿ ಕೊಡಬೇಕು. ಹಾರುವ ದಿಗಂತ ಅವರಾದ್ದಾಗಬೇಕು ಎಂದು ಕವಿ ಖಲೀಲ್ ಗಿಬ್ರಾನ್ ಹೇಳಿದ್ದಾರೆ. ನಾವು ಮಕ್ಕಳು ಹಾರಬೇಕಾದ ದಿಗಂತ ನಿರ್ಧಾರ ಮಾಡುತ್ತಿರುವುದು ತಪ್ಪು ಮತ್ತು ಪ್ರಕೃತಿ ವಿರೋಧವಾದದ್ದು ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಅಭಿಪ್ರಾಯಪಟ್ಟಿದ್ದಾರೆ.
ಕಲಾಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬುಧವಾರ ಮಕ್ಕಳ ಬಹುರೂಪಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಈಗಲಾದರೂ ನಾವು ಎಚ್ಚೆತ್ತುಕೊಂಡು ಮಕ್ಕಳ ಭಾಷೆಯ ಕುತೂಹಲವನ್ನು ಪೋಷಿಸಬೇಕು ಎಂದರು.
ಬಹುರೂಪಿಯಲ್ಲಿ ಮಕ್ಕಳ ರಂಗಭೂಮಿ ಈ ವರ್ಷದಿಂದ ಶುರು ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆ. ನಿರ್ದಿಂಗತದಲ್ಲಿ ಮಕ್ಕಳ ರಂಗಭೂಮಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಮಕ್ಕಳ ಬಗ್ಗೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಮಕ್ಕಳ ರಂಗಭೂಮಿ ಪ್ರಯೋಗ ನಡೆಯುತ್ತಿದೆ. ಶಿಕ್ಷಣದಲ್ಲಿ ರಂಗಭೂಮಿ ಎಷ್ಟು ಮುಖ್ಯ ಎಂಬ ಬಗ್ಗೆ ಗಂಭೀರ ಚಿಂತನೆ ಮಾಡುತ್ತಿದ್ದೇವೆ ಎಂದರು.
ಪ್ರಕೃತಿಯಲ್ಲಿ ಒಂದು ಮಾತಿದೆ. ಬೆಳೆಸುತ್ತೇನೆ ಎನ್ನುವುದು ಅಹಂಕಾರ. ಬೆಳೆಸಲು ಬಿಡುತ್ತೇನೆ ಎನ್ನುವುದು ವಿನಯ. ಪ್ರಕೃತಿಯಲ್ಲಿ ಅಡುಗೆ ಮಾಡುವುದು ಯಾರು? ಸೂರ್ಯ ಒಬ್ಬನೇ ಅಡುಗೆ ಮಾಡುವುದು. ಮಾವಿನ ಮರದಲ್ಲಿ ಮಾವು ತೆಂಗಿನ ಮರದಲ್ಲಿ ತೆಂಗು, ಜಿಂಕೆಗಳಿಗೆ ಹುಲ್ಲು, ಇಡೀ ಪ್ರಪಂಚದ ಎಲ್ಲ ಜೀವರಾಶಿಗಳು ಪ್ರಕೃತಿ ಏನನ್ನಾದರೂ ಕೊಡುತ್ತದೆ. ಮನುಷ್ಯ ಬುದ್ಧಿವಂತ ಈರುಳ್ಳಿ ಬೆಳ್ಳುಳಿ ಬಳಸಿಕೊಂಡು ಬಿರಿಯಾನಿ ಮಾಡಿಕೊಂಡ. ಅದನ್ನು ಮೀರುತ್ತಿರುವುದು ಅಪಾಯಕಾರಿ ಎಂದು ತಿಳಿಸಿದರು.
ಮಕ್ಕಳ ವಿಷಯದಲ್ಲಿ ಎಡವುತ್ತಿದ್ದೇವೆ. ಮಕ್ಕಳು ಯಾವ ರೀತಿ ನಡೆದುಕೊಳ್ಳಬೇಕು. ಏನನ್ನು ನೋಡಬೇಕು ಎಂಬುದು ದೊಡ್ಡವರು ನಿರ್ಧಾರ ಮಾಡುತ್ತಿದ್ದಾರೆ. ಮಗುವಿನ ಇವತ್ತಿನ ಪ್ರಪಂಚ ಮರೆಯಾಗುತ್ತಿದೆ. ತನ್ನನ್ನು ತಾನು ರೂಪಿಸಿಕೊಳ್ಳುವ ಪ್ರಪಂಚ ಇದೆ. ಸೂಕ್ಷ್ಮಗೊಳಿಸುವ ಪ್ರಪಂಚ ಇಲ್ಲ. ನಮ್ಮ ಭಯ, ಒತ್ತಡ, ಭವಿಷ್ಯದ ಕಲ್ಪನೆಯ ಮೂರ್ಖತೆಯನ್ನು ಮಕ್ಕಳ ಮೇಲೆ ಹೇರುತ್ತಿದ್ದೇವೆ. ಇದು ಅಪಾಯಕಾರಿ ಎಂದರು.
ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರ್ ಪ್ರಸ್ತಾವಿಕವಾಗಿ ಮಾತನಾಡಿದರು. ರಂಗ ಸಮಾಜದ ಸದಸ್ಯ ಶಶಿಧರ್ ಬಾರಿಘಾಟ್, ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ಇದ್ದರು. ರಂಗಾಯಣದ ಉಪ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಸ್ವಾಗತಿಸಿದರು. ಧನಂಜಯ ಆರ್.ಸಿ. ಮತ್ತು ತಂಡದವರು ರಂಗಗೀತೆ ಹಾಡಿದರು.