ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ಹಿಂಪಡೆಯುವಂತೆ ಅಹಿಂದ ಸಂಘಟನೆಗಳ ಒತ್ತಾಯ

Update: 2024-08-17 18:14 GMT

ಅಹಿಂದ ಸಂಘಟನೆಗಳ ಸಭೆ

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಿ ಆ.19ರ ಸೋಮವಾರ ಮೈಸೂರು ಬಂದ್ ಆಚರಿಸಲು ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಪ್ರಗತಿಪರ ಸಂಘಟನೆ, ಸಿದ್ದರಾಮಯ್ಯ ಅಭಿಮಾನಿಗಳು ನಿರ್ಧರಿಸಿದ್ದಾರೆ.

ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ನೇತೃತ್ವದಲ್ಲಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ಕನಕ ಭವನದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಹಾಜರಿದ್ದ 150ಕ್ಕೂ ಹೆಚ್ಚು ಮಂದಿ ಸೋಮವಾರ ʼಮೈಸೂರು ಬಂದ್ʼ ಆಚರಿಸಲು ಸರ್ವಾನುಮತದಿಂದ ಸಮ್ಮತಿಸಿದರು. ಅಲ್ಲದೇ ಬಂದ್ ನಡೆಸಲು ಇತರೆ ಸಂಘ ಸಂಸ್ಥೆಗಳ ಬೆಂಬಲ ಪಡೆಯುವ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಶಿವಣ್ಣ, ಸೀತಾರಾಮ್, ಗೋಪಿ, ಶಿವರಾಮ್, ಮಣಿಕಂಠ , ಹಿನ್ಕಲ್ ಉದಯ್, ಕೋಟೆ ಆನಂದ್ , ರಾಮಸ್ವಾಮಿ, ಬಸಪ್ಪ, ನಾಡನಹಳ್ಳಿ ರವಿ, ಹರೀಶ್ , ವೆಂಕಟೇಶ್ , ಜಟ್ಟಿಹುಂಡಿ ಬಸವರಾಜ್, ಛಾಯಾ ಇತರೆ ಮುಖಂಡರು ಭಾಗವಹಿಸಿದ್ದರು.

ಅಹಿಂದ ಸಂಘಟನೆಗಳಿಂದ ಸಭೆ :

ಶನಿವಾರ ಮೈಸೂರಿನ ಜಲದರ್ಶಿನಿಯಲ್ಲಿ ಸಭೆ ನಡೆಸಿದ ಪ್ರಗತಿಪರ ಸಂಘಟನೆ, ಸಿದ್ದರಾಮಯ್ಯ ಅಭಿಮಾನಿಗಳು, ಬಿಜೆಪಿಯು ರಾಜ್ಯಪಾಲರನ್ನು ಕೈಗೊಂಬೆಯಂತೆ ಮಾಡಿಕೊಂಡಿದೆ. ಮುಡಾ ಹಗರಣದಲ್ಲಿ ನೇರ ಆರೋಪಿಯಲ್ಲದ ಸಿಎಂ ಸಿದ್ದರಾಮಯ್ಯ ಅವರನ್ನು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಿ ಅವರ ರಾಜಕೀಯ ಜೀವನವನ್ನು ಮುಗಿಸಲು ಹೊರಟಿದ್ದಾರೆ. ಇದನ್ನು ಖಂಡಿಸಿ ಆ.19ರಂದು ಪ್ರದೇಶ ಕುರುಬರ ಸಂಘ ಕೈಗೊಂಡಿರುವ ಬಂದ್ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರದಲ್ಲಿ ಸಂವಿಧಾನ ಬಾಹಿರವಾಗಿ ಒಂದು ಪಕ್ಷದ ವಕ್ತಾರರಂತೆ ನಿರ್ಧಾರ ಕೈಕೊಂಡಿರುವ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಅವರನ್ನು ರಾಷ್ಟ್ರಪತಿಗಳು ವಾಪಸ್ಸು ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News