ರಾಮಮಂದಿರ ಅಪೂರ್ಣ ಎಂದು ಹೇಳುವವರಿಗೆ ಪರಿಪೂರ್ಣ ಜ್ಞಾನ ಇಲ್ಲ: ಶಂಕರಾಚಾರ್ಯ ಮಠದ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

Update: 2024-01-19 13:53 GMT

ಮೈಸೂರು: ರಾಮಮಂದಿರ ಪೂರ್ಣಗೊಳ್ಳದೆ ಪ್ರಾಣಪ್ರತಿಷ್ಠಾಪನೆ ಮಾಡುವುದು ಸರಿಯಲ್ಲ ಎಂದು ಯಾರು ವಿರೋಧಿಸುತ್ತಿದ್ದಾರೊ ಅವರಿಗೆ ಸಂಪೂರ್ಣ ಜ್ಞಾನ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ಶಂಕರಾಚಾರ್ಯ ಮಠದ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ನಗರದ ಗನ್ ಹೌಸ್ ವೃತ್ತದಲ್ಲಿರುವ ರಾಮಲಲ್ಲ ಮೂರ್ತಿ ಕತ್ತನೆಯ ಶಿಲ್ಪಿ ಅರುಣ್ ಯೋಗಿರಾಜ್ ಕುಟುಂಬದವರನ್ನು ಶುಕ್ರವಾರ ಸನ್ಮಾನಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅಪೂರ್ಣ ಎಂದು ಯಾರು ಹೇಳುತ್ತಾರೆ, ಅವರಿಗೆ ಪರಿಪೂರ್ಣ ಜ್ಞಾನ ಇಲ್ಲದಿರುವುದು ಸಮಸ್ಯೆಯಾಗಿದೆ. ದೇಶಾದ್ಯಂತ ಯಾವುದೇ ಭಾಗಕ್ಕೆ ಹೋದರೂ ಮಂದಿರ ಇಂತವರು ಕಟ್ಟಿಸಿದರು ಎನ್ನುವುದಕ್ಕಿಂದ ಚೋಳರು, ಹೊಯ್ಸಳರು, ಕದಂಬರು, ವಿಜಯನಗರ ಸಾಮ್ರಾಜ್ಯ ರಾಷ್ಟ್ರಕೂಟರ ಕಾಲದಲ್ಲಿ ಎಂದು ಹೇಳಿ ಒಂದೊಂದು ರಾಜ ಮನೆತನ ಕಟ್ಟಿದ್ದು ಎಂದು ಹೇಳುತ್ತೇವೆ. ಒಂದು ದೇವಸ್ಥಾನ ಕಟ್ಟಲು ಹತ್ತಾರು ನೂರಾರು ವರ್ಷಗಳು ಬೇಕು. ಬೇಲೂರಿನ ಚನ್ನಕೇಶವ ದೇವಸ್ಥಾನ ಕಟ್ಟಲು ನೂರ ಮೂರು ವರ್ಷ ಬೇಕಾಗಿತ್ತು ಎಂದು ಹೇಳಿದರು.

ನಮ್ಮ ದೇವಸ್ಥಾನಗಳು ಮಸೀದಿ ಮತ್ತು ಚರ್ಚ್ ತರ ಅಲ್ಲ, ಸಿಮೆಂಟಿನ ಕಟ್ಟಡಗಳಲ್ಲ. ಅಲ್ಲಿ ವಿಗ್ರಹಗಳನ್ನು ಪ್ರತಿಷ್ಠಾಪನೆ ಪ್ರಾಣ ಪ್ರತಿಷ್ಠೆ ನಡೆಯುತ್ತದೆ. ವಾಸ್ತು ಶಿಲ್ಪ ಇರುತ್ತದೆ. ಹತ್ತಾರು ವರ್ಷಗಳ ಕಾಲ ದೇವಸ್ಥಾನದ ಕೆಲಸಗಳು ನಡೆಯುತ್ತದೆ. ಚಾಮುಂಡಿ ಬೆಟ್ಟ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿ ವಿಜಯನಗರ ಕಾಲದಲ್ಲಿ ಅಭಿವೃದ್ಧಿಗೊಂಡು, ಯದುವಂಶದ ಮುಮ್ಮಡಿ ಕೃಷ್ಣರಾಜ ಹೊಡೆಯರ್ ಕಾಲದಲ್ಲಿ ಗೋಪುರ ನಿರ್ಮಾಣವಾಗಿದೆ ಎಂದರು.

"ಶಂಕರಚಾರ್ಯರ ಮಠದಲ್ಲಿ ಇರುವ ಸ್ವಾಮೀಜಿಗಳ ರಾಜಕೀಯ ಹಿನ್ನಲೆ, ನಿಲುವು ನನಗೆ ಗೊತ್ತಿದೆ. 2014 ರಲ್ಲಿ ವಾರಣಾಸಿಯಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಚುನಾವಣೆಗೆ ನಿಲ್ಲುತ್ತೇವೆ ಎಂದು ಹೋಗಿದ್ದರು. ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರನ್ನು ಅಂದಿನ ಯುಪಿಎ ಸರಕಾರ ಒತ್ತಡ ಹೇರಿ ಬಂಧಿಸಿದ್ದಾಗ ಈ ಸ್ವಾಮೀಜಿಗಳು ಮಾತನಾಡಲಿಲ್ಲ. ಅವರನ್ನು ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋಗಿ ಕೂರಿಸಿಕೊಂಡಾಗ ಇವರಿಗೆ ಧ್ವನಿ ಇರಲಿಲ್ಲ. ಒಳ್ಳೆ ಕೆಲಸ ಮಾಡಬೇಕಾದರೆ ಸುಮಾರು ಜನ ಕಾವಿ ಹಾಕಿರುವವರು ಮಾತನಾಡುತ್ತಾರೆ. ಅವರ ಮಾತಿಗೆ ಬೆಲೆ ಕೊಡಬಾರದು ಎಂದು ಕಿಡಿಕಾರಿದರು.

ಸಚಿವ ರಾಜಣ್ಣ ಅವರು ವಾಲ್ಮೀಕಿ ಸಮಾಜಕ್ಕೆ ಸೇರಿದವರು ಎಂದು ಭಾವಿಸುತ್ತೇನೆ. ವಾಲ್ಮೀಕಿ ಅವರಿಗೆ ತನ್ನದೇ ಆದ ಹಿನ್ನಲೆ ಇದೆ. ಅಂತಹ ಸಮಾಜಕ್ಕೆ ಸೇರಿದ ರಾಜಣ್ಣ ಅವರು, ರಾಮನನ್ನು ಎದೆಗೂಡಿನಲ್ಲಿ ಇಟ್ಟು ಪೂಜಿಸಬೇಕಿತ್ತು. ಟಿಪ್ಪು ಜಯಂತಿ ಮಾಡಿದ ಸಿದ್ಧರಾಮಯ್ಯ ಅವರನ್ನು ಓಲೈಸಿಕೊಂಡು ಉಪಮುಖ್ಯಮಂತ್ರಿ ಸ್ಥಾನ ಪಡೆಯಬೇಕು ಎಂದು ಬಯಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News