ʼಅರಮನೆಯಲ್ಲಿ ಖಾಸಗಿ ದರ್ಬಾರ್ʼ: ಸಂಸದರಾದ ನಂತರ ಮೊದಲ ಬಾರಿಗೆ ಸಿಂಹಾಸನ ಏರಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

Update: 2024-10-03 17:50 GMT

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ನಂತರ ಅರಮನೆಯಲ್ಲಿ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್​ ವಿವಿಧ ಧಾರ್ಮಿಕ ಪೂಜೆಗಳ ಬಳಿಕ ಖಾಸಗಿ ದರ್ಬಾರ್​ ನಡೆಸಿದರು.

ಅರಮನೆಯಲ್ಲಿ ರಾಜವೈಭವ ಮರುಕಳಿಸಿದ್ದು, ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್ ಗುರುವಾರ ರತ್ನಖಚಿತ ಸಿಂಹಾಸನವೇರಿ 10ನೇ ಬಾರಿಗೆ ಖಾಸಗಿ ದರ್ಬಾರ್ ನಡೆಸಿದರು.

ಚಾಮುಂಡಿ ಬೆಟ್ಟದಲ್ಲಿಂದು ಚಾಮುಂಡೇಶ್ವರಿಗೆ ಅಗ್ರಪೂಜೆಯೊಡನೆ ದಸರಾ ಹಬ್ಬಕ್ಕೆ ಚಾಲನೆ ದೊರೆತರೆ, ಇತ್ತ ಅರಮನೆಯಲ್ಲಿ ಖಾಸಗಿ ದರ್ಬಾರ್‌ನೊಂದಿಗೆ ನವರಾತ್ರಿ ಆಚರಣೆ ಚಾಲನೆ ಪಡೆದುಕೊಂಡಿತು. ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದರಾದ ಬಳಿಕ ಮೊದಲ ಬಾರಿಗೆ ದರ್ಬಾರ್ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸನವೇರಿ ದರ್ಬಾರ್ ನಡೆಸಿದರು.

ಮುತ್ತಿನ ಮಣಿಯ ವಿನ್ಯಾಸವುಳ್ಳ ತಿಳಿ ನೇರಳೆ ವರ್ಣದ ಮೈಸೂರು ಪೇಟ, ರೇಷ್ಮೆ ಖುರ್ತಾ-ಪೈಜಾಮ-ಶಲ್ಯವನ್ನೊಳಗೊಂಡ ರಾಜಪೋಷಾಕು, ರಾಜಲಾಂಛನ ಗಂಡಭೇರುಂಡ ಒಳಗೊಂಡ ರತ್ನಖಚಿತ ಸರ, ಪರಂಪರಾಗತ ಆಭರಣಗಳನ್ನು ಧರಿಸಿ, ರಾಜಮನೆತನದ ಪಟ್ಟದ ಕತ್ತಿ ಹಿಡಿದು ಸಿಂಹಾಸನದಲ್ಲಿ ಆಸೀನರಾಗಿ ದರ್ಬಾರ್ ನಡೆಸಿದರು. ಸಿಂಹಾಸನಾರೋಹಣಕ್ಕೆ ಆಗಮಿಸುತ್ತಿದ್ದಂತೆಯೇ ಜಯಘೋಷ, ಸೇವಕರು ಉಡಾಸ್ ಸೇವೆ, ಮಂಗಳವಾದ್ಯ ಮೊಳಗಿಸಿದರು.

ಅರಮನೆಯ ಆಸ್ಥಾನ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಯದುವೀರ್​ ರತ್ನಖಚಿತ ಸಿಂಹಾಸನಕ್ಕೆ ನಿಯಮದನ್ವಯ ಪೂಜೆ ಸಲ್ಲಿಸಿದರು. ದರ್ಬಾರ್ ಹಾಲ್‌ನಲ್ಲಿ ಆಯೋಜಿಸಿದ್ದ ನವಗ್ರಹ ಪೂಜೆ, ಸಿಂಹಾಸನದ ಮುಂದಿರಿಸಿದ್ದ ಸಿಂಹದ ಮುಖ ಮತ್ತು ಕಳಶಕ್ಕೆ ಅಕ್ಷತೆ, ಕುಂಕುಮ, ಅರಿಶಿಣ, ಹೂ ಹಾಕಿ ಗಂಧದ ಕಡ್ಡಿ ಹಾಗೂ ಮಂಗಳಾರತಿ ಬೆಳಗಿ ಪೂಜೆ ಸಲ್ಲಿಸಿದರು. ಸಿಂಹಾಸನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸಿಂಹಾಸನಾರೋಹಣ ಮಾಡಿದರು. ರಾಜಗಾಂಭೀರ್ಯದಿಂದ ರತ್ನಸಿಂಹಾಸನ ಏರಿ ಆಸ್ಥಾನಕ್ಕೆ ಬಲಗೈ ಎತ್ತಿ ಸಲ್ಯೂಟ್ ಮಾಡಿ ಗತ್ತಿನಿಂದ ಕೂತು ದರ್ಬಾರ್ ಆರಂಭಿಸಿದರು.

ಕರ್ನಾಟಕ ಪೊಲೀಸ್ ಬ್ಯಾಂಡ್ ಸಿಬ್ಬಂದಿ ಕಾಯೋ ಶ್ರೀ ಗೌರಿ ಗೀತೆ ನುಡಿಸಿ ಗೌರವ ಸಲ್ಲಿಸಿದರು. ಶ್ರೀ ಮಹಾಗಣಪತಿಂ, ಸರಸ್ವತಿ ಭಗವತಿಂ, ಸರಸ್ವತಿ, ಬ್ರಹ್ಮಮುರಾರಿ, ಐಗಿರಿ ನಂದಿನಿ, ವಿಜಯಾಂಬಿಕೆ, ಶ್ರೀ ಚಾಮುಂಡೇಶ್ವರಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡುಗಳನ್ನು ನುಡಿಸಿದರು. ಜಯಘೋಷಗಳು ಮೊಳಗಿದವು.

ಸುಮಾರು ಅರ್ಧಗಂಟೆ ಕಾಲ ಸಿಂಹಾಸನದಲ್ಲಿ ಕುಳಿತ ಯದುವೀರ್ ಚಾಮುಂಡಿಬೆಟ್ಟ, ಪರಕಾಲಮಠ, ನಂಜನಗೂಡು, ಮೇಲುಕೋಟೆ, ಶ್ರೀರಂಗಪಟ್ಟಣ, ಶೃಂಗೇರಿ ಸೇರಿದಂತೆ 23 ವಿವಿಧ ದೇವಾಲಯಗಳಿಂದ ತಂದಿದ್ದ ಪೂರ್ಣಫಲ ಪ್ರಸಾದ ಸ್ವೀಕರಿಸಿದರು. ಗಂಗೆಯ ಸಂಪ್ರೋಕ್ಷಣೆಯ ಬಳಿಕ ದರ್ಬಾರ್‌ಗೆ ಸಹಕಾರ ನೀಡಿದವರಿಗೆ ಯದುವೀರ್, ಕಿರುಕಾಣಿಕೆ ನೀಡಿ ಗೌರವ ಸಲ್ಲಿಸಿ ಸಿಂಹಾಸನದಿಂದ ಇಳಿದರು.

ಇದಕ್ಕೂ ಮುನ್ನ, ಶುಭ ಲಗ್ನದಲ್ಲಿ ಬೆಳಗ್ಗೆ 5.45ರಿಂದ 6.10ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹವನ್ನು ಜೋಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಯದುವೀರ್ ಅವರಿಗೆ ಬೆಳಗ್ಗೆ ಎದ್ದ ತಕ್ಷಣವೇ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿಸಿ, ಅರಮನೆಗೆ ಬರುವ ಕ್ಷೌರಿಕರಿಂದ ಚೌಲವಾದ ನಂತರ ಮಂಗಳಸ್ನಾನ ಮಾಡಿಸಲಾಯಿತು. ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಹೆಂಗಸರು ಆರತಿ ಬೆಳಗಿದರು.

ಚಾಮುಂಡಿ ತೊಟ್ಟಿಯಲ್ಲಿ ಪೂಜೆ ಬಳಿಕ ಯದುವೀರ್​ ಅವರಿಗೆ ಕಂಕಣ ಧಾರಣೆ ಮಾಡಲಾಯಿತು. ಮತ್ತೊಂದೆಡೆ, ಪತ್ನಿ ತ್ರಿಷಿಕಾ ಅವರು ವಾಣಿವಿಲಾಸ ದೇವರಮನೆಯಲ್ಲಿ ಕಂಕಣ ಧಾರಣೆ ಮಾಡಿದರು. ನಂತರ ಚಾಮುಂಡೇಶ್ವರಿ ಮತ್ತು ಗಣಪತಿಗೆ ಪೂಜೆ ಸಲ್ಲಿಸಿದರು. ಬಳಿಕ ಅರಮನೆಯ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸುವನ್ನು ಕರೆತಂದು ಯದುವೀರ್ ಪೂಜೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News