ಉವೈಸಿ ಮನೆಯಲ್ಲಿ ದಾಂಧಲೆ ಘಟನೆ | ದಿಲ್ಲಿ ಪೊಲೀಸರಿಂದ ಎಫ್ಐಆರ್ ದಾಖಲು

Update: 2024-06-29 15:37 GMT

ಅಸಾಸುದ್ದೀನ್ ಉವೈಸಿ |  PC : ANI  

ಹೊಸದಿಲ್ಲಿ : ಹೊಸದಿಲ್ಲಿಯಲ್ಲಿರುವ ತನ್ನ ಅಧಿಕೃತ ನಿವಾಸದ ಹೊರಗೆ ಎರಡು ದಿನಗಳ ಹಿಂದೆ ನಡೆದ ದಾಂಧಲೆಗೆ ಸಂಬಂಧಿಸಿ ಎಐಎಂಐಎಂನ ವರಿಷ್ಠ ಹಾಗೂ ಹೈದರಾಬಾದ್ ಸಂಸದ ಅಸಾಸುದ್ದೀನ್ ಉವೈಸಿ ಸಲ್ಲಿಸಿದ ದೂರಿನ ಆಧಾರದಲ್ಲಿ ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಲುಟಿಯನ್ಸ್ ದಿಲ್ಲಿಯ ಅಶೋಕ ರಸ್ತೆಯಲ್ಲಿರುವ ಉವೈಸಿ ಅವರ ನಿವಾಸದ ಹೊರಗೆ ಅಳವಡಿಸಲಾಗಿದ್ದ ನಾಮಫಲಕಕ್ಕೆ ಸಂಘ ಪರಿವಾರದ ಸದಸ್ಯರೆಂದು ಹೇಳಲಾದ ಕೆಲವು ಅಪರಿಚಿತ ದುಷ್ಕರ್ಮಿಗಳು ಗುರುವಾರ ಕಪ್ಪು ಬಣ್ಣ ಬಳಿದಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದಿಲ್ಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಮನಾರ್ಹ ವಿಚಾರವೆಂದರೆ, ಅಸಾದುದ್ದೀನ್ ಉವೈಸಿ ಅವರ ನಿವಾಸ ದಾಳಿಗೆ ಒಳಗಾಗುತ್ತಿರುವುದು ಇದು ಮೊದಲ ಬಾರಿಯಲ್ಲ. ದಿಲ್ಲಿ ಪೊಲೀಸ್ ಕೇಂದ್ರ ಕಚೇರಿಯ ಎದುರು ಇರುವ ಉವೈಸಿ ಅವರ ನಿವಾಸ ಈ ಹಿಂದೆ ಕೂಡ ಹಲವು ಬಾರಿ ಸಂಘಪರಿವಾರದ ಸದಸ್ಯರ ದಾಳಿಗೆ ತುತ್ತಾಗಿತ್ತು.

ಘಟನೆಯ ನಂತರ ಅಸಾದುದ್ದೀನ್ ಉವೈಸಿ ಅವರು ತನ್ನ ನಿವಾಸದ ಮೇಲೆ ನಡೆದ ದಾಳಿ ಕುರಿತಂತೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಮ್ಮ ಎದುರೇ ಈ ಘಟನೆ ಹೇಗೆ ಸಂಭವಿಸಿತು ಎಂದು ನಾನು ಪೊಲೀಸ್ ಅಧಿಕಾರಿಗಳನ್ನು ಕೇಳಿದಾಗ, ಅದಕ್ಕೆ ಅವರು ಅಸಹಾಯಕತೆ ವ್ಯಕ್ತಪಡಿಸಿದರು. ಅಮಿತ್ ಶಾ ಅವರೇ ಇದು ನಿಮ್ಮ ಕಣ್ಣೆದುರೇ ನಡೆಯುತ್ತಿದೆ. ಸಂಸದರಿಗೆ ಸುರಕ್ಷತೆಯ ಖಾತರಿ ನೀಡುತ್ತಿರಾ ಇಲ್ಲವೇ ಎಂಬುದನ್ನು ತಿಳಿಸಿ ಎಂದು ಉವೈಸಿ ಎಕ್ಸ್ ನ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಇಂತಹ ಘಟನೆಗಳು ನನ್ನನ್ನು ಹೆದರಿಸಲಾರವು. ಸಾವರ್ಕರ್ ರೀತಿಯ ಇಂತಹ ಹೇಡಿತನದ ನಡವಳಿಕೆಯನ್ನು ನಿಲ್ಲಿಸಿ. ನನ್ನನ್ನು ಎದುರಿಸಿ. ಶಾಯಿ ಎರಚಿ ಅಥವಾ ಕಲ್ಲು ತೂರಾಟ ನಡೆಸಿ ಓಡಿ ಹೋಗಬೇಡಿ ಎಂದು ಉವೈಸಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News