"ಬಹುಸಂಖ್ಯಾತ ಸಮುದಾಯ ಅಲ್ಪಸಂಖ್ಯಾತವಾಗಬಹುದು": ಮತಾಂತರ ಉದ್ದೇಶಗಳ ಧಾರ್ಮಿಕ ಸಭೆಗಳು ನಿಲ್ಲಬೇಕು ಎಂದ ಅಲಹಾಬಾದ್ ಹೈಕೋರ್ಟ್
ಲಕ್ನೋ: ಮತಾಂತರಗಳು ನಡೆಯುವ ಧಾರ್ಮಿಕ ಸಭೆಗಳನ್ನು ನಿಲ್ಲಿಸಬೇಕು. ಇಂತಹ ಸಭೆಗಳಿಗೆ ಅನುಮತಿಸಿದರೆ ದೇಶದ “ಬಹುಸಂಖ್ಯಾತ ಸಮುದಾಯವು ಅಲ್ಪಸಂಖ್ಯಾತವಾಗಬಹುದು,” ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಉತ್ತರ ಪ್ರದೇಶದ ಹಮೀರ್ಪುರ್‌ನಿಂದ ಜನರನ್ನು ದಿಲ್ಲಿಗೆ ಮತಾಂತರ ಉದ್ದೇಶದಿಂದ ಕರೆದುಕೊಂಡು ಬಂದ ಆರೋಪ ಎದುರಿಸುತ್ತಿದ್ದ ಕೈಲಾಶ್ ಎಂಬಾತನ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ.
ರಾಮಕಲಿ ಪ್ರಜಾಪತಿ ಎಂಬಾತನ ಸೋದರ ರಾಮಫಲ್ ಎಂಬಾತನನ್ನು ಕೈಲಾಶ್ ದಿಲ್ಲಿಗೆ ಕರೆದೊಯ್ದಿದ್ದು ಆತ ನಂತರ ಮನೆಗೆ ವಾಪಸಾಗಿರಲಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ. ದಿಲ್ಲಿಯ ಸಭೆಗೆ ಹಮೀರ್ಪುರ್‌ನ ಹಲವರನ್ನು ಕರೆದೊಯ್ಯಲಾಗಿತ್ತು ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಗಿತ್ತು ಎಂದು ಈ ಪ್ರಕರಣದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಉತ್ತರ ಪ್ರದೇಶದ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯಿದೆಯ ನಿಬಂಧನೆಗಳನ್ವಯ ಕೈಲಾಶ್‌ನನ್ನು ಬಂಧಿಸಲಾಗಿತ್ತು.
ಕೈಲಾಶ್ ಗ್ರಾಮದ ಜನರನ್ನು ಮತಾಂತರ ಉದ್ದೇಶಕ್ಕಾಗಿ ಕರೆದೊಯ್ಯುತ್ತಿದ್ದ ಹಾಗೂ ಅದಕ್ಕೆ ಬದಲಾಗಿ ಆತನಿಗೆ ಹಣ ದೊರೆಯುತ್ತಿತ್ತು ಎಂದು ಉತ್ತರ ಪ್ರದೇಶ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವಕೇಟ್ ಜನರಲ್ ಪಿ ಕೆ ಗಿರಿ ಹೇಳಿದರು.
ರಾಮಫಲ್‌ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿಲ್ಲ ಆತ ಕೇವಲ ಕ್ರೈಸ್ತ ಸಭೆಯಲ್ಲಿ ಭಾಗವಹಿಸಿದ್ದ ಎಂದು ಕೈಲಾಶ್ ಪರ ವಕೀಲರು ವಾದಿಸಿದ್ದರಲ್ಲದೆ ಸಭೆಯನ್ನು ಸೋನು ಪಾಸ್ಟರ್ ನಡೆಸುತ್ತಿದ್ದರು ಅವರಿಗೆ ಈಗಾಗಲೇ ಜಾಮೀನು ದೊರಕಿದೆ ಎಂದೂ ಹೇಳಿದರು.
ಸಂವಿಧಾನದ ವಿಧಿ 25 ಜನರಿಗೆ ಅವರ ಇಚ್ಛೆಯ ಧರ್ಮವನ್ನು ಅನುಸರಿಸಲು ಅನುಮತಿಸುತ್ತದೆ ಆದರೆ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಕ್ಕೆ ಅನುಮತಿಸುವುದಿಲ್ಲ.
ಮತಾಂತರ ಉದ್ದೇಶದ ಧಾರ್ಮಿಕ ಸಬೆಗಳಿಗೆ ಅನುಮತಿಸಿದರೆ ಬಹುಸಂಖ್ಯಾತ ಸಮುದಾಯ ಅಲ್ಪಸಂಖ್ಯಾತವಾಗಬಹುದು, ಅಂತಹ ಸಭೆಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಹೇಳಿದ ನ್ಯಾಯಾಲಯ ಕೈಲಾಶ್‌ಗೆ ಜಾಮೀನು ನಿರಾಕರಿಸಿದೆ.