ಪಾಸ್ಪೋರ್ಟ್ ಅಧಿಕಾರಿಗಳು, ಏಜೆಂಟರ ಮಾನವ ಕಳ್ಳಸಾಗಣೆ ಜಾಲ ಬಹಿರಂಗ | ಮುಂಬೈನಲ್ಲಿ ನೌಕಾಪಡೆ ಅಧಿಕಾರಿಗಳ ಬಂಧನ

Update: 2024-07-01 17:08 GMT

ಸಾಂದರ್ಭಿಕ ಚಿತ್ರ

ಮುಂಬೈ : ಆಘಾತಕಾರಿ ಬೆಳವಣಿಗೆಯೊಂದರಲ್ಲಿ ನಕಲಿ ದಾಖಲೆಗಳನ್ನು ಬಳಸಿ ಜನರನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸುತ್ತಿದ್ದ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ನೌಕಾಪಡೆ ಅಧಿಕಾರಿಗಳನ್ನು ಈಗಾಗಲೇ ಇಲ್ಲಿ ಬಂಧಿಸಲಾಗಿದ್ದು, ಈ ಜಾಲದಲ್ಲಿ ಪಾಸ್ಪೋರ್ಟ್ ಅಧಿಕಾರಿಗಳು ಮತ್ತು ಏಜೆಂಟರು ಭಾಗಿಯಾಗಿದ್ದು ಬಹಿರಂಗಗೊಂಡಿದೆ.

ನೌಕಾಪಡೆಯ ಸಬ್-ಲೆಫ್ಟಿನಂಟ್ ಬ್ರಹ್ಮಜ್ಯೋತಿ ಪ್ರಕರಣದ ಕೇಂದ್ರ ಬಿಂದುವಾಗಿದ್ದಾನೆ. ಮಾಸ್ಟರ್ ಮೈಂಡ್ ಆಗಿದ್ದ ಎನ್ನಲಾದ ಈತನ ಸೂಚನೆಗಳ ಮೇರೆಗೆ ಲೆಫ್ಟಿನಂಟ್ ಕಮಾಂಡರ್ ವಿಪಿನ್ ಡಾಗರ್ ಕೊರಿಯಾ ದೂತಾವಾಸಕ್ಕೆ ಭೇಟಿ ನೀಡುತ್ತಿದ್ದ, ನಕಲಿ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ ಮತ್ತು ಅವುಗಳನ್ನು ದೂತಾವಾಸಕ್ಕೆ ಕಳುಹಿಸುತ್ತಿದ್ದ. ಇಬ್ಬರೂ ಈಗ ಕಂಬಿಗಳ ಹಿಂದೆ ಸೇರಿದ್ದಾರೆ.

ಮುಂಬೈನ ಎಂ ಆರ್ ಎ ಮಾರ್ಗ್ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಬಳಿಕ ತನಿಖೆಯನ್ನು ಕ್ರೈಂ ಬ್ರ್ಯಾಂಚ್ ಗೆ ಹಸ್ತಾಂತರಿಸಲಾಗಿದೆ. ಬ್ರಹ್ಮಜ್ಯೋತಿಯ ನಿಕಟವರ್ತಿ ಸಿಮ್ರನ್ ತೇಜಿ ತನ್ನ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಅಪರಾಧದ ಆದಾಯವನ್ನು ರವಾನಿಸಿದ್ದಳು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಜೂ.30ರಂದು ಇನ್ನೂ ಇಬ್ಬರನ್ನು ಜಮ್ಮು-ಕಾಶ್ಮೀರದಲ್ಲಿ ಕ್ರೈಂ ಬ್ರ್ಯಾಂಚ್ ಬಂಧಿಸಿದೆ. ಈ ಪೈಕಿ ರವಿಕುಮಾರ್ ಎಂಬಾತ ನಕಲಿ ದಾಖಲೆಗಳನ್ನು ಸಲ್ಲಿಸಿ ಪಡೆದಿದ್ದ ವೀಸಾದಲ್ಲಿ ದಕ್ಷಿಣ ಕೊರಿಯಾಕ್ಕೆ ತೆರಳಲು ಬಯಸಿದ್ದ ಫಲಾನುಭವಿಯಾಗಿದ್ದರೆ, ದೀಪಕ್ ಡೋಗ್ರಾ ಎಂಬಾತ ಒಟ್ಟಾರೆ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಹೊಂದಿದ್ದ ಮತ್ತು ಉದ್ಯೋಗ ವೀಸಾದಲ್ಲಿ ವಿದೇಶಕ್ಕೆ ತೆರಳಲು ಬಯಸುವ ಮಿಕಗಳನ್ನು ಬಲೆಗೆ ಕೆಡವುತ್ತಿದ್ದ ಎನ್ನಲಾಗಿದೆ.

ಮುಂಬೈನಲ್ಲಿರುವ ದಕ್ಷಿಣ ಕೊರಿಯಾದ ದೂತಾವಾಸವು ದೂರು ನೀಡಿದ ಬಳಿಕ ಈ ಮಾನವ ಕಳ್ಳಸಾಗಣೆ ದಂಧೆಯು ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ಪೋಲಿಸರ ಪ್ರಕಾರ ಹೆಚ್ಚಾಗಿ ಜಮ್ಮು-ಕಾಶ್ಮೀರದಿಂದ ಹಲವರು ನಕಲಿ ಪಾಸ್ಪೋರ್ಟ್ ಗಳನ್ನು ಬಳಸಿ ದಕ್ಷಿಣ ಕೊರಿಯಾಕ್ಕೆ ಪ್ರಯಾಣಿಸುತ್ತಾರೆ. ಅಲ್ಲಿ ತಲುಪಿದ ಬಳಿಕ ತಮ್ಮ ಪಾಸ್ಪೋರ್ಟ್ ಗಳನ್ನು ನಾಶಗೊಳಿಸುವ ಅವರು ತಮ್ಮ ವಿಸ್ತ್ರತ ವಾಸ್ತವ್ಯಕ್ಕಾಗಿ ಆಶ್ರಯವನ್ನು ಕೋರುತ್ತಾರೆ.

ಈ ನಡುವೆ ಸಿಬಿಐ ಮುಂಬೈನ ಪಾಸ್ಪೋರ್ಟ್ ಸೇವಾ ಕೇಂದ್ರಗಳ 14 ಅಧಿಕಾರಿಗಳು ಮತ್ತು 18 ಪಾಸ್ಪೋರ್ಟ್ ಏಜೆಂಟರ ವಿರುದ್ಧ 12 ಪ್ರಕರಣಗಳನ್ನು ದಾಖಲಿಸಿದೆ. ಈ ಅಧಿಕಾರಿಗಳು ಏಜೆಂಟರೊಂದಿಗೆ ಶಾಮೀಲಾಗಿ ನಕಲಿ ಪಾಸ್ಪೋರ್ಟ್ ಗಳನ್ನು ವಿತರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಅದಕ್ಕಾಗಿ ಈ ಅಧಿಕಾರಿಗಳು ತಮ್ಮ ಅಥವಾ ತಮ್ಮ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳ ಮೂಲಕ ಲಕ್ಷಾಂತರ ರೂ.ಗಳನ್ನು ಪಡೆದುಕೊಳ್ಳುತ್ತಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News