ಮಣಿಪುರದ ಕುರಿತು ಮೌನ ಮುರಿದ ಪ್ರಧಾನಿ ಮೋದಿ | ಕಾಂಗ್ರೆಸ್‌ನಿಂದ ತೀವ್ರ ಟೀಕೆ

Update: 2024-07-03 16:55 GMT

 ನರೇಂದ್ರ ಮೋದಿ |  PC : PTI 

ಹೊಸದಿಲ್ಲಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸಭೆಯಲ್ಲಿ ಬುಧವಾರ ಕೊನೆಗೂ ಮೌನ ಮುರಿದಿದ್ದಾರೆ.

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸಹಜ ಸ್ಥಿತಿ ಮರಳಿ ತರಲು ಸರಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ರಾಜ್ಯದಲ್ಲಿ ಹಿಂಸಾಚಾರ ನಿರಂತರ ಕ್ಷೀಣಿಸುತ್ತಿದೆ ಹಾಗೂ ಹೆಚ್ಚಿನ ಭಾಗಗಳಲ್ಲಿ ಶಾಲೆಗಳು ಮರು ಆರಂಭವಾಗುತ್ತಿವೆ ಎಂದು ಮೋದಿ ಹೇಳಿದರು.

ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಸಹಕರಿಸುವಂತೆ ಪ್ರತಿಯೊಬ್ಬರಲ್ಲಿ ವಿನಂತಿಸಿದ್ದೇವೆ. 500ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. 11 ಸಾವಿರಕ್ಕೂ ಅಧಿಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಮಣಿಪುರ ನೆರೆ ಪರಿಸ್ಥಿತಿಯನ್ನು ಕೂಡ ಎದುರಿಸುತ್ತಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಯನ್ನು ಅಲ್ಲಿಗೆ ರವಾನಿಸಲಾಗಿದೆ ಎಂದು ಅವರು ಹೇಳಿದರು.

ಮಣಿಪುರದ ಘಟನೆಗಳಿಂದ ಪ್ರತಿಪಕ್ಷಗಳು ಲಾಭ ಪಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದ ಮೋದಿ, ಮಣಿಪುರವನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಿ. ಇಲ್ಲದೇ ಇದ್ದರೆ, ಒಂದು ದಿನ ಮಣಿಪುರ ನಿಮ್ಮನ್ನು ತಿರಸ್ಕರಿಸಲಿದೆ ಎಂದು ಕಾಂಗ್ರೆಸ್ ಅನ್ನು ಉಲ್ಲೇಖಿಸಿ ಹೇಳಿದರು.

ಮಣಿಪುರದ ಪರಿಸ್ಥಿತಿ ಕುರಿತು ಮೋದಿ ಅವರ ಬೆರಗುಗೊಳಿಸುವ ಪ್ರತಿಪಾದನೆ ಮಾಡಿದ್ದಾರೆ ಎಂದು ಪ್ರತಿಪಾದಿಸುವ ಮೂಲಕ ಕಾಂಗ್ರೆಸ್ ಮೋದಿ ಅವರು ಟೀಕೆಗೆ ಪ್ರತಿಕ್ರಿಯಿಸಿತು.

‘‘ಮಣಿಪುರ ವಿಷಯದ ಕುರಿತಂತೆ ಸಂಪೂರ್ಣ ಮೌನವಾಗಿದ್ದ ತಿಂಗಳುಗಳ ಬಳಿಕ ಇಂದು ಪ್ರಧಾನಿ ಮಣಿಪುರದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಬೆರಗು ಹುಟ್ಟಿಸುವ ಪ್ರತಿಪಾದನೆ ಮಾಡಿದ್ದಾರೆ. ಆದರೆ, ವಾಸ್ತವವಾಗಿ ಇನ್ನರ್ ಮಣಿಪುರದ ಸಂಸದ ಲೋಕಸಭೆಯಲ್ಲಿ ಜುಲೈ 1ರಂದು ತಿಳಿಸಿದಂತೆ ಮಣಿಪುರದಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.

‘‘2023 ಮೇ 3ರಂದು ರಾತ್ರಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಪ್ರಧಾನ ಮಂತ್ರಿ ಮಣಿಪುರಕ್ಕೆ ಭೇಟಿ ನೀಡಿಲ್ಲ. ರಾಜ್ಯದ ರಾಜಕೀಯ ನಾಯಕರನ್ನು ಕೂಡ ಅವರು ಭೇಟಿಯಾಗಿಲ್ಲ. ರಾಷ್ಟ್ರಪತಿ ಅವರ ಭಾಷಣ ಕೂಡ ಈ ವಿಷಯದ ಕುರಿತಂತೆ ಮೌನ ವಹಿಸಿತ್ತು’’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News