ಅಸ್ಸಾಂ, ಅರುಣಾಚಲದಲ್ಲಿ ವ್ಯಾಪಕ ಮಳೆ; ಪ್ರವಾಹ ಪರಿಸ್ಥಿತಿ ಉಲ್ಬಣ
ಗುವಾಹತಿ: ವ್ಯಾಪಕ ಮಳೆಯಿಂದಾಗಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಉಪನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಿದ್ದು, ಪ್ರವಾಹ ಪರಿಸ್ಥಿತಿ ಉಲ್ಬಣಿಸಿದೆ.
ಹಲವು ಕಡೆ ಭೂಕುಸಿತದ ಘಟನೆಗಳು ವರದಿಯಾಗಿದ್ದು, ಭಾರತ- ಚೀನಾ ಗಡಿಯ ಹಲವು ಪ್ರದೇಶಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಅಸ್ಸಾಂನಲ್ಲಿ ಪ್ರವಾಹಪೀಡಿತ ಜಿಲ್ಲೆಗಳ ಸಂಖ್ಯೆ 12 ರಿಂದ 19ಕ್ಕೇರಿದೆ ಎಂದು ಅಸ್ಸಾಂ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರ ಹೇಳಿದೆ.
ಅರುಣಾಚಲ ಪ್ರದೇಶದ ಇಟಾ ನಗರದಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿರುವುದರಿಂದ ಜುಲೈ 2ರಿಂದ 6ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕುರುಂಗ್ ಕುಮಿ ಎಂಬಲ್ಲಿ ಕುರುಂಗ್ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಸೆಪ್ಪಾ ಮತ್ತು ಪೂರ್ವ ಕಮೆಂಗ್ ಜಿಲ್ಲೆಗಳಲ್ಲಿ ಉಕ್ಕಿ ಹರಿಯುತ್ತಿರುವ ಕಮೆಂಗ್ ನದಿ ಹಲವು ಮನೆಗಳನ್ನು ನಾಶಪಡಿಸಿದೆ.
ಮುಂದಿನ ಕೆಲ ದಿನಗಳಲ್ಲಿ ಅಂದರೆ ವಾರಾಂತ್ಯದವರೆಗೂ ಈಶಾನ್ಯ ಭಾರತದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಸ್ಸಾಂನಲ್ಲಿ 8000 ಕ್ಕೂ ಹೆಚ್ಚು ಮಂದಿ ಪರಿಹಾರ ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ. ಟಿನ್ ಸುಕಿಯಾ ಜಿಲ್ಲೆಯಲ್ಲಿ ಮತ್ತೊಂದು ಪ್ರವಾಹಸಂಬಂಧಿ ಸಾವು ಸಂಭವಿಸಿದ್ದು, ನೆರೆ ಹಾವಳಿಯಿಂದ ಮೃತಪಟ್ಟವರ ಸಂಖ್ಯೆ 35ಕ್ಕೇರಿದೆ.
ಅರುಣಾಚಲ ಪ್ರದೇಶದ ಜಲಾನಯನ ಪ್ರದೇಶಳಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸಿದೆ. ಮುಂದಿನ ಮೂರು ನಾಲ್ಕು ದಿನಗಳು ತೀರಾ ಪ್ರಮುಖ. ಸಣ್ಣ ಪುಟ್ಟ ಅಂಶಗಳ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಬೇಕಿದೆ ಎಂದು ಸಿಎಂ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.
ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಎನ್ ಡಿಆರ್ ಎಫ್ ಮತ್ತು ಸೇನೆಯ ನೆರವನನ್ನು ಮೀಸಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.