ಸಿಬಿಐನಿಂದ ಕೇಜ್ರಿವಾಲ್ ಬಂಧನ | ಆಪ್ ನಿಂದ ಪ್ರತಿಭಟನೆ, ಹಲವರು ಪೊಲೀಸ್ ವಶಕ್ಕೆ

Update: 2024-06-29 15:42 GMT

ಅರವಿಂದ ಕೇಜ್ರಿವಾಲ್ 

ಹೊಸದಿಲ್ಲಿ : ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿರುವುದರ ವಿರುದ್ಧ ಆಪ್ ಬಿಜೆಪಿ ಕಚೇರಿಯ ಹೊರಗೆ ಶನಿವಾರ ಪ್ರತಿಭಟನೆ ನಡೆಸಿದೆ.

ಬಿಗಿ ಭದ್ರತೆ ನಡುವೆ ನಡೆದೆ ಪ್ರತಿಭಟನೆಯಲ್ಲಿ ಸಚಿವೆ ಆತಿಶಿ ಸೇರಿದಂತೆ ಆಮ್ ಆದ್ಮಿ ಪಕ್ಷದ ಸಂಸದರು, ಶಾಸಕರು, ಕೌನ್ಸಿಲರ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತಿಭಟನೆಗೆ ನಡೆಸಲು ಆಮ್ ಆದ್ಮಿ ಪಕ್ಷ ಅನುಮತಿ ಪಡೆದುಕೊಂಡಿರಲಿಲ್ಲ. ಆದುದರಿಂದ ದಿಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಇದರ ಹೊರತಾಗಿಯೂ ಆಪ್ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿ ಕಚೇರಿಯತ್ತ ಪ್ರತಿಭಟನಾ ರ‍್ಯಾಲಿ ನಡೆಸಿದರು. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಘಷಣೆ ನಡೆಯಿತು. ಪೊಲೀಸರು ಹಲವು ಪ್ರತಿಭಟನಕಾರರನ್ನು ವಶಕ್ಕೆ ತೆಗೆದುಕೊಂಡರು.

ಈ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿದ ದಿಲ್ಲಿ ಸಚಿವ ಸೌರಭ್ ಭಾರದ್ವಾಜ್, ದೇಶ ಸರ್ವಾಧಿಕಾರಕ್ಕೆ ಸಾಕ್ಷಿಯಾಗುತ್ತಿದೆ. ಮುಖ್ಯಮಂತ್ರಿ ಅವರನ್ನು ಕಾರಾಗೃಹದಲ್ಲಿ ಇರಿಸಲು, ಸಿಬಿಐ ಇದನ್ನು ಮಾಡಿದೆ. ಕಳೆದ ಎರಡು ವರ್ಷಗಳಿಂದ ಅವರು ತನಿಖೆ ನಡೆಸುತ್ತಿದ್ದಾರೆ. ಹೇಮಂತ್ ಸೊರೇನ್ ವಿಚಾರದಲ್ಲಿ ಕೂಡ ಇದೇ ರೀತಿ ಮಾಡಿದರು. ನಾವು ಇದರ ವಿರುದ್ಧ ಸಂಸತ್ತಿನಲ್ಲಿ ಹಾಗೂ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಆಪ್ ಶಾಸಕ ಕುಲದೀಪ್ ಕುಮಾರ್, ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಸಿಲುಕಿಸಲು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಯನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ನಾವು ನಮ್ಮ ಪ್ರತಿಭಟನೆಯನ್ನು ಸಂಸತ್, ವಿಧಾನ ಸಭಾ ಹಾಗೂ ರಸ್ತೆಗೆ ಕೊಂಡೊಯ್ಯಲಿದ್ದೇವೆ. ತನಿಖೆ ಆರಂಭಿಸಿದಂದಿನಿಂದ ಎರಡು ವರ್ಷಗಳಲ್ಲಿ ಸಿಬಿಐ ಏನು ಪತ್ತೆ ಮಾಡಿದೆ? ಎಂದು ಅವರು ಪ್ರಶ್ನಿಸಿದರು.

ಈ ನಡುವೆ ಆಪ್ನ ಕಚೇರಿಯ ಹೊರಗೆ ಹಾಕಲಾದ ಪೋಸ್ಟರ್ನಲ್ಲಿ ಹಿಂದಿಯಲ್ಲಿ ಈಡಿ ಹಾಗೂ ಸಿಬಿಐಯನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಿ ಎಂದು ಬರೆಯಲಾಗಿದೆ. ಇದಲ್ಲದೆ, ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸುವ ಬ್ಯಾನರ್ಗಳನ್ನು ಅನ್ನು ಕೂಡ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ಸಂದರ್ಭ ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News