ದ.ಕೊರಿಯಾಕ್ಕೆ ಮಾನವ ಕಳ್ಳಸಾಗಾಣಿಕೆ:ಮುಂಬೈ ಪೋಲಿಸರಿಂದ ನೌಕಾಪಡೆ ಅಧಿಕಾರಿ ಬಂಧನ

Update: 2024-06-29 17:03 GMT

ಸಾಂದರ್ಭಿಕ ಚಿತ್ರ

ಮುಂಬೈ,ಜೂ.29: ನಕಲಿ ದಾಖಲೆಗಳನ್ನು ಬಳಸಿ ದಕ್ಷಿಣ ಕೊರಿಯಾಕ್ಕೆ ಜನರನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಜಾಲದ ಸದಸ್ಯನಾಗಿದ್ದ ನೌಕಾಪಡೆಯ ಲೆಫ್ಟಿನಂಟ್ ಕಮಾಂಡರ್ ಶ್ರೇಣಿಯ ಅಧಿಕಾರಿಯನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೋಲಿಸರು ಬಂಧಿಸಿರುವ ಹಿನ್ನೆಲೆಯಲ್ಲಿ ಕಾನೂನು ಜಾರಿ ಸಂಸ್ಥೆಗಳೊಂದಿಗೆ ತಾನು ಸಂಪೂರ್ಣವಾಗಿ ಸಹಕರಿಸುವುದಾಗಿ ನೌಕಾಪಡೆಯು ಶನಿವಾರ ಹೇಳಿದೆ.

ಲೆ.ಕ.ವಿಪಿನಕುಮಾರ ಡಾಗರ್(28)ರನ್ನು ಗುರುವಾರ ದಕ್ಷಿಣ ಮುಂಬೈನ ಕೊಲಾಬಾದಿಂದ ಬಂಧಿಸಲಾಗಿದೆ.

ಪೋಲಿಸರ ಪ್ರಕಾರ ಡಾಗರ್ ಸಹವರ್ತಿಗಳು ನಕಲಿ ದಾಖಲೆಗಳ ಮೂಲಕ 8-10 ಜನರನ್ನು ತಾವು ದಕ್ಷಿಣ ಕೊರಿಯಾಕ್ಕೆ ಕಳುಹಿಸಿದ್ದೇವೆ ಮತ್ತು ಅವರಿಂದ ತಲಾ 10 ಲ.ರೂ.ಗಳನ್ನು ಪಡೆದುಕೊಂಡಿದ್ದೇವೆ ಎಂದು ಒಪ್ಪಿಕೊಂಡಿದ್ದರು.

ಅಧಿಕಾರಿಯ ದುಷ್ಕೃತ್ಯದ ಬಗ್ಗೆ ಮುಂಬೈನ ರಿಪಬ್ಲಿಕ್ ಆಫ್ ಕೊರಿಯಾ ಕಾನ್ಸುಲೇಟ್‌ನಿಂದ ದೂರನ್ನು ನೌಕಾಪಡೆಯು ಸ್ವೀಕರಿಸಿತ್ತು. ನೌಕಾಪಡೆಯು ನಡೆಸಿದ ತನಿಖೆಯಲ್ಲಿ ಈ ಪ್ರಕರಣವು ನಕಲಿ ವೀಸಾ ರ್ಯಾಕೆಟ್ ಗ್ಯಾಂಗ್ ಜೊತೆಗೆ ಸಂಭಾವ್ಯ ನಂಟುಗಳನ್ನು ಹೊಂದಿದೆ ಎನ್ನುವುದು ಬೆಳಕಿಗೆ ಬಂದಿತ್ತು. ಅದರಂತೆ ನೌಕಾಪಡೆಯು ತನ್ನ ಬಳಿಯಿದ್ದ ಮಾಹಿತಿಗಳನ್ನು ಪೋಲಿಸರಿಗೆ ಒದಗಿಸಿದ್ದು,ಅವರು ವಿವರವಾದ ತನಿಖೆಯನ್ನು ಆರಂಭಿಸಿದ್ದರು. ಪಡೆಯು ಕಾನೂನು ಜಾರಿ ಏಜೆನ್ಸಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದರು.

ಹರ್ಯಾಣಾ ನಿವಾಸಿಯಾಗಿರುವ ಡಾಗರ್ ವಾಯುಪಡೆ ಸಿಬ್ಬಂದಿಯೋರ್ವರ ಪುತ್ರನಾಗಿದ್ದು,ನ್ಯಾಯಾಲಯವು ಅವರಿಗೆ ಜು.5ರವರೆಗೆ ಪೋಲಿಸ್ ಕಸ್ಟಡಿಯನ್ನು ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News