ಮುಂಬೈ: ಟೀಂ ಇಂಡಿಯಾದ ವಿಜಯೋತ್ಸವ ಸಂದರ್ಭ 11 ಜನರು ಆಸ್ಪತ್ರೆಗೆ ದಾಖಲು

Update: 2024-07-05 16:01 GMT

PC : PTI 

ಮುಂಬೈ: ಗುರುವಾರ ದಕ್ಷಿಣ ಮುಂಬೈಯಲ್ಲಿ ಟಿ-20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ವಿಜಯೋತ್ಸವ ಮೆರವಣಿಗೆ ಮಾರ್ಗದುದ್ದಕ್ಕೂ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದು,ಈ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾದ ಮತ್ತು ತಲೆ ತಿರುಗುವಿಕೆಯನ್ನು ಅನುಭವಿಸಿದ್ದ ಕನಿಷ್ಠ 11 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ಅಧಿಕಾರಿಯೋರ್ವರು ಶುಕ್ರವಾರ ತಿಳಿಸಿದರು.

ವಿಪರೀತ ಜನಸಂದಣಿಯಿಂದಾಗಿ ಗಾಯಗೊಂಡಿದ್ದ ಅಥವಾ ಉಸಿರಾಟದ ತೊಂದರೆಗಳನ್ನು ದೂರಿಕೊಂಡಿದ್ದ ಒಂಭತ್ತು ಜನರನ್ನು ಸರಕಾರಿ ಸ್ವಾಮ್ಯದ ಜಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರ ದೇಹಸ್ಥಿತಿ ಈಗ ಸ್ಥಿರವಾಗಿದೆ ಎಂದು ಜೆಜೆ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಡೀನ್ ಮಾಹಿತಿ ನೀಡಿದರು.

ಓರ್ವ ಅಸ್ವಸ್ಥ ವ್ಯಕ್ತಿಯನ್ನು ಸರಕಾರಿ ಸ್ವಾಮ್ಯದ ಸೈಂಟ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಮತ್ತು ಪ್ರಥಮ ಚಿಕಿತ್ಸೆಯ ಬಳಿಕ ಮನೆಗೆ ಕಳುಹಿಸಲಾಗಿದೆ. ಇನ್ನೋರ್ವ ವ್ಯಕ್ತಿಯನ್ನು ದಕ್ಷಿಣ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಮತ್ತು ಚಿಕಿತ್ಸೆಯ ಬಳಿಕ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಗುರುವಾರ ಸಂಜೆ ಭಾರತೀಯ ಕ್ರಿಕೆಟ್ ತಂಡದ ವಿಜಯೋತ್ಸವ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ಮರೀನ್ ಡ್ರೈವ್‌ನಲ್ಲಿ ನೆರೆದಿದ್ದರು. ಇದು ಕಾಲ್ತುಳಿತದಂತಹ ಸನ್ನಿವೇಶಕ್ಕೆ ಕಾರಣವಾಗಿತ್ತು.

ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಭಾರೀ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಹಾಗೂ ಮರೀನ್ ಡ್ರೈವ್ ಮತ್ತು ವಾಂಖೆಡೆ ಸ್ಟೇಡಿಯಂ ನಡುವೆ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ವಿಜಯೋತ್ಸವ ಮೆರವಣಿಗೆ ಸಂದರ್ಭದಲ್ಲಿ ಜನಜಂಗುಳಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಕ್ಕಾಗಿ ಮುಂಬೈ ಪೊಲೀಸ್ ಆಯುಕ್ತ ವಿವೇಕ ಫನ್ಸಾಲ್ಕರ್ ಅವರು ಪೊಲೀಸ್ ರನ್ನು ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News