ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತೊರೆದು ಏಕನಾಥ್ ಶಿಂಧೆ ಬಣ ಸೇರಿದ ಎಂಎಲ್ ಸಿ ಮನೀಶಾ ಕಯಾಂಡೆ
ಮುಂಬೈ: ಶಿವಸೇನಾ (ಯುಬಿಟಿ) ಎಂಎಲ್‌ಸಿ ಮನೀಶಾ ಕಯಾಂದೆ ರವಿವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಗೊಂಡಿದ್ದಾರೆ.
ಪಕ್ಷದ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಉದ್ಧವ್ ಠಾಕ್ರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಠಾಕ್ರೆ ಬಣದ ಮಹಿಳೆಯರಿಂದಲೂ ಹಣ ಕೇಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಶಿವಸೇನೆಯ ಸಂಸ್ಥಾಪನಾ ದಿನದ ಮುನ್ನಾದಿನದಂದು ಮನೀಶಾ ಕಯಾಂದೆ ಪಕ್ಷಾಂತರ ಮಾಡಿದ್ದಾರೆ. ಇದು ಎರಡು ದಿನಗಳಲ್ಲಿ ಠಾಕ್ರೆ ನೇತೃತ್ವದ ಬಣಕ್ಕೆ ಎರಡನೇ ಆಘಾತವಾಗಿದೆ. ಮೊನ್ನೆಯಷ್ಟೇ ಹಿರಿಯ ನಾಯಕ ಶಿಶಿರ್ ಶಿಂಧೆ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ನೆರೆಯ ಥಾಣೆಯಲ್ಲಿ ಶಿವಸೇನೆಗೆ ಸೇರಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಮನೀಶಾ ಕಯಾಂದೆ, ಪಕ್ಷದ ಕಾರ್ಯಕರ್ತರು ಶಿವಸೇನೆ (ಯುಬಿಟಿ) ಏಕೆ ತೊರೆಯುತ್ತಿದ್ದಾರೆ ಎಂಬುದರ ಕುರಿತು ಠಾಕ್ರೆ ನೇತೃತ್ವದ ಬಣ ಆತ್ಮಾವಲೋಕನ ಮಾಡಿಕೊಳ್ಳುತ್ತದೆಯೇ ಎಂದು ನೋಡಲು ತಾನು ಒಂದು ವರ್ಷ ಕಾದಿರುವೆ ಎಂದು ಹೇಳಿದ್ದಾರೆ.