ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ | ಗುಜರಾತ್ ನ 7 ಸ್ಥಳಗಳಲ್ಲಿ ಸಿಬಿಐ ದಾಳಿ

Update: 2024-06-29 15:41 GMT

PC : PTI 

ಹೊಸದಿಲ್ಲಿ : ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ನ 7 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಗುಜರಾತ್ನ ನಾಲ್ಕು ಜಿಲ್ಲೆಗಳಾದ ಆನಂದ್, ಖೇಡಾ, ಅಹ್ಮದಾಬಾದ್ ಹಾಗೂ ಗೋಧ್ರಾದಲ್ಲಿ ಶಂಕಿತರಿಗೆ ಸೇರಿದ ಕಟ್ಟಡಗಳ ಮೇಲೆ ಇಂದು ಬೆಳಗ್ಗೆ ದಾಳಿ ಆರಂಭಿಸಿತು ಎಂದು ಅವರು ತಿಳಿಸಿದ್ದಾರೆ.

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿ ಸಿಬಿಐ ಜಾರ್ಖಂಡ್ನ ಹಝಾರಿಬಾಗ್ ಶಾಲೆಯ ಪ್ರಾಂಶುಪಾಲ, ಉಪ ಪ್ರಾಂಶುಪಾಲ ಹಾಗೂ ಹಿಂದಿ ಪತ್ರಿಕೆಯ ವರದಿಗಾರನನ್ನು ಶುಕ್ರವಾರ ಬಂಧಿಸಿದೆ ಎಂದು ಅವರು ತಿಳಿಸಿದ್ದಾರೆ.

ಓಯಸಿಸ್ ಶಾಲೆಯ ಪ್ರಾಂಶುಪಾಲ ಏಹ್ಸಾನುಲ್ ಹಕ್ ಅವರನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಮೇ 5ರಂದು ನಡೆಸಿದ ನೀಟ್-ಯುಜಿ ಪರೀಕ್ಷೆಯ ಹಝಾರಿಬಾಗ್ನ ನಗರ ಸಂಯೋಜಕರನ್ನಾಗಿ ನಿಯೋಜಿಸಲಾಗಿತ್ತು.

ಉಪ ಪ್ರಾಂಶುಪಾಲ ಇಮ್ತಿಯಾಝ್ ಆಲಂ ಅವರನ್ನು ಓಯಸಿಸ್ ಶಾಲೆಗೆ ಎನ್ಟಿಎಯ ಪರಿವೀಕ್ಷಕ ಹಾಗೂ ಕೇಂದ್ರ ಸಂಯೋಜಕರನ್ನಾಗಿ ನೇಮಕ ಮಾಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಜಿಲ್ಲೆಯ ಇತರ ಐವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಶುಪಾಲರು ಹಾಗೂ ಉಪ ಪ್ರಾಂಶುಪಾಲರಿಗೆ ನೆರವು ನೀಡಲು ಯತ್ನಿಸಿದ ಆರೋಪದಲ್ಲಿ ಪತ್ರಕರ್ತ ಜಮಾಲುದ್ದೀನ್ ಅನ್ಸಾರಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನೀಟ್-ಯುಜಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಸಾವದಂತೆ ದಾಖಲಿಸಿದ ತನ್ನ ಸ್ವಂತ ಎಫ್ಐಆರ್ ಹಾಗೂ ತಾನು ತನಿಖೆ ಕೈಗೆತ್ತಿಕೊಂಡಿರುವ ರಾಜ್ಯಗಳಲ್ಲಿ ಸರಕಾರ ದಾಖಲಿಸಿದ 5 ಎಫ್ಐಆರ್ ಸೇರಿದಂತೆ ಒಟ್ಟು 6 ಎಫ್ಐಆರ್ಗಳನ್ನು ಸಿಬಿಐ ದಾಖಲಿಸಿಕೊಂಡಿದೆ.

ಬಿಹಾರ್ ಹಾಗೂ ಗುಜರಾತ್ನಲ್ಲಿ ತಲಾ ಒಂದು ಪ್ರಕರಣ ಹಾಗೂ ರಾಜಸ್ಥಾನದಲ್ಲಿ 3 ಪ್ರಕರಣಗಳ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಎಂಬಿಬಿಎಸ್, ಬಿಡಿಎಸ್, ಆಯುಷ್ ಹಾಗೂ ಇತರ ಸಂಬಂಧಿತ ಕೋರ್ಸ್ಗಳ ಪ್ರವೇಶಕ್ಕೆ ಎನ್ಟಿಎ ನೀಟ್-ಯುಜಿ ಪರೀಕ್ಷೆಯನ್ನು ನಡೆಸುತ್ತದೆ. ಈ ವರ್ಷ 14 ವಿದೇಶಗಳು ಹಾಗೂ 571 ನಗರಗಳ 4,750 ಕೇಂದ್ರಗಳಲ್ಲಿ ಈ ವರ್ಷ ಮೇ 5ರಂದು ಎನ್ಟಿಎ ನೀಟ್ ಪರೀಕ್ಷೆ ಆಯೋಜಿಸಿತ್ತು. ಈ ಪರೀಕ್ಷೆಗೆ 23 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News