ಬಿಹಾರ| ಮಹಾದಲಿತರ 21 ಮನೆಗಳಿಗೆ ಬೆಂಕಿ; 10 ಮಂದಿಯ ಬಂಧನ

Update: 2024-09-19 07:17 GMT

Photo: PTI

ನಾವಡ: ಮಹಾದಲಿತ ಸಮುದಾಯಕ್ಕೆ ಸೇರಿದ ರವಿದಾಸ್ ಮತ್ತು ಮಾಂಝಿಗಳು ವಾಸಿಸುತ್ತಿದ್ದ ಸರಕಾರಿ ಜಮೀನನ್ನು ಕಿತ್ತುಕೊಳ್ಳಲು ಪರಿಶಿಷ್ಟ ಜಾತಿಗೆ ಸೇರಿದ ಪಾಸ್ವಾನ್ ಜಾತಿಯ ದುಷ್ಕರ್ಮಿಗಳು 21 ಹುಲ್ಲುಹಾಸಿನ ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಬುಧವಾರ ಸಂಜೆ ನಾವಡ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಈ ಘಟನೆಯು ಬುಧವಾರ ಸಂಜೆ 6.45ಕ್ಕೆ ನಾವಡ ಜಿಲ್ಲೆಯ ಮುಫ್ಫಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾನಗರದಲ್ಲಿನ ಮಹಾದಲಿತರ ಜನವಸತಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆಬದಿಯಲ್ಲಿದ್ದ ಮಹಾದಲಿತರ 80 ಮನೆಗಳ ಜನವಸತಿ ಪ್ರದೇಶ ಸುಟ್ಟು ಬೂದಿಯಾಗಿದ್ದರೂ, ಯಾವುದೇ ಸಾವು-ನೋವು ವರದಿಯಾಗಿಲ್ಲ. ರಾತ್ರಿ 11 ಗಂಟೆ ವೇಳೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ತಮ್ಮ ಮನೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಸಂತ್ರಸ್ತರಿಗೆ ಜಿಲ್ಲಾಡಳಿತವು ಬದಲಿ ವಸತಿ ವ್ಯವಸ್ಥೆಯನ್ನು ಏರ್ಪಾಡು ಮಾಡಿದೆ.

ಈ ಸಂಬಂಧ ನಾವಡ ಪೊಲೀಸರು ಸ್ಥಳೀಯ ನಿವಾಸಿ ನಂದು ಪಾಸ್ವಾನ್ ಮತ್ತು ಇನ್ನಿತರ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಕೂಡಾ ನಂದು ಪಾಸ್ವಾನ್ ಸಂತ್ರಸ್ತರಿಗೆ ಜಾಗವನ್ನು ತೆರವುಗೊಳಿಸುವಂತೆ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News