ಬಿಜೆಪಿಯೊಂದಿಗೆ ಕೈಜೋಡಿಸುವಂತೆ 51 ಎನ್ಸಿಪಿ ಶಾಸಕರು ಕಳೆದ ವರ್ಷ ಪವಾರ್ ರನ್ನು ಒತ್ತಾಯಿಸಿದ್ದರು: ಪ್ರಫುಲ್ ಪಟೇಲ್
ಮುಂಬೈ: ಕಳೆದ ವರ್ಷ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರಕಾರ ಪತನಗೊಂಡ ಬಳಿಕ, ಬಿಜೆಪಿಯೊಂದಿಗೆ ಮೈತ್ರಿ ಬೆಳೆಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP)ಯ 53 ಶಾಸಕರ ಪೈಕಿ 51 ಶಾಸಕರು ಮುಖ್ಯಸ್ಥ ಶರದ್ ಪವಾರ್ ರನ್ನು ಒತ್ತಾಯಿಸಿದ್ದರು ಎಂದು ಪಕ್ಷದ ನಾಯಕ ಪ್ರಫುಲ್ ಪಟೇಲ್ ಹೇಳಿಕೊಂಡಿದ್ದಾರೆ.
‘‘ಎನ್ಸಿಪಿಗೆ ಶಿವಸೇನೆಯೊಂದಿಗೆ ಮೈತ್ರಿ ಬೆಳೆಸಲು ಸಾಧ್ಯವಾದರೆ, ಬಿಜೆಪಿಯೊಂದಿಗೆ ಯಾಕೆ ಆಗುವುದಿಲ್ಲ’’ ಎಂದು ಮರಾಠಿ ಸುದ್ದಿ ಚಾನೆಲ್ ‘ಝೀ 24 ಟಾಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಪಟೇಲ್ ಹೇಳಿದರು.
ಕಳೆದ ವರ್ಷದ ಜೂನ್ ನಲ್ಲಿ, ಏಕನಾಥ ಶಿಂದೆ ತನ್ನ ಬೆಂಬಲಿಗ ಶಾಸಕರೊಂದಿಗೆ ಶಿವಸೇನೆಯಿಂದ ಹೊರನಡೆದು ಬಿಜೆಪಿಯೊಂದಿಗೆ ಕೈಜೋಡಿಸಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರಕಾರವನ್ನು ಉರುಳಿಸಿದ್ದರು. ಬಳಿಕ, ನೂತನ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು.
ರವಿವಾರ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್, ಶಿಂದೆ ನೇತೃತ್ವದ ಸರಕಾರಕ್ಕೆ ಸೇರ್ಪಡೆಗೊಂಡು ಮಹಾ ವಿಕಾಸ ಅಘಾಡಿಗೆ ಮತ್ತೊಂದು ಭಾರೀ ಏಟನ್ನು ನೀಡಿದ್ದಾರೆ. ಅವರು ನಾಲ್ಕು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಮೂರನೇ ಬಾರಿಗೆ ರಾಜ್ಯದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ವರ್ಷದ ಬೆಳವಣಿಗೆಗಳ ಬಳಿಕ, ಬಿಜೆಪಿಯೊಂದಿಗೆ ಎನ್ಸಿಪಿ ಕೈಜೋಡಿಸುವ ಸಾಧ್ಯತೆ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚೆ ನಡೆದಿತ್ತು ಎಂದು ಎನ್ಸಿಪಿಯ ರಾಜ್ಯಸಭಾ ಸದಸ್ಯರೂ ಆಗಿರುವ ಪಟೇಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ, ಆ ಚರ್ಚೆ ಅಪೂರ್ಣವಾಗಿ ಉಳಿಯಿತು ಎಂದು ಅವರು ನುಡಿದರು. ಅಜಿತ್ ಪವಾರ್ ಜೊತೆಗೆ ಬಿಜೆಪಿಯೊಂದಿಗೆ ಕೈಜೋಡಿಸಿದ ಎನ್ಸಿಪಿಯ ಹಿರಿಯ ನಾಯಕರಲ್ಲಿ ಪಟೇಲ್ ಕೂಡ ಸೇರಿದ್ದಾರೆ. ಅವರು ಶರದ್ ಪವಾರ್ರ ಆಪ್ತರು ಎನ್ನಲಾಗಿದೆ.
‘‘ಪಕ್ಷವು ಅಧಿಕಾರದಿಂದ ಹೊರಗುಳಿಯಬಾರದು ಎಂದು ಹೇಳುವ ಪತ್ರವೊಂದನ್ನು ಎನ್ಸಿಪಿ ಸಚಿವರು ಶರದ್ ಪವಾರ್ಗೆ ಬರೆದಿದ್ದಾರೆ’’ ಎಂದು ಅವರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ‘‘ಸರಕಾರವನ್ನು ಸೇರುವ ಸಾಧ್ಯತೆಯ ಬಗ್ಗೆ ಪರಿಶೀಲಿಸಿದರೆ ಹಾನಿಯೇನಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು. ಅಜಿತ್ ಪವಾರ್ ಗೆ 43 ಶಾಸಕರು ಬೆಂಬಲ ಸೂಚಿಸಿದ್ದಾರೆ ಎಂಬುದಾಗಿಯೂ ಅವರು ಹೇಳಿಕೊಂಡರು.
‘‘ಈ ನಿರ್ಧಾರವನ್ನು ನಾವು ಸಂತೋಷದಿಂದ ತೆಗೆದುಕೊಂಡಿದ್ದೇವೆ ಎನ್ನಲು ಸಾಧ್ಯವಿಲ್ಲ. ರಾಜಕೀಯದಲ್ಲಿ, ಕೆಲವು ಸಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’’ ಎಂದು ಅವರು ಅಭಿಪ್ರಾಯಪಟ್ಟರು.