“8 ದಿನ ಅಲ್ಲ 8 ತಿಂಗಳು”: 2025 ರಲ್ಲಿ ಭೂಮಿಗೆ ಮರಳಲಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್

Update: 2024-08-25 03:44 GMT

ಹಿರಿಯ ನಾಸಾ ಗಗನಯಾತ್ರಿ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ (PC: x.com/DDNewsHindi)

ವಾಷಿಂಗ್ಟನ್: ಕಳೆದ ಜೂನ್ ತಿಂಗಳಲ್ಲಿ ಬೋಯಿಂಗ್ ನ ದೋಷಯುಕ್ತ ಸ್ಟಾರ್ ಲೈನರ್ ಕ್ಯಾಪ್ಸೂಲ್ ನಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಇಬ್ಬರು ನಾಸಾ ಗಗನಯಾತ್ರಿಗಳು ಮುಂದಿನ ವರ್ಷ ಸ್ಪೇಸ್ಎಕ್ಸ್ ವಾಹನದಲ್ಲಿ ಭೂಮಿಗೆ ವಾಪಸ್ಸಾಗಲಿದ್ದಾರೆ ಎಂದು ನಾಸಾ ಶನಿವಾರ ಪ್ರಕಟಿಸಿದೆ. ಸ್ಟಾರ್ ಲೈನರ್ ನ ಪ್ರೊಪಲ್ಷನ್ ಸಿಸ್ಟಂ ತನ್ನ ಸಿಬ್ಬಂದಿಯನ್ನು ಹೊತ್ತು ತರುವುದು ತೀರಾ ಅಪಾಯಕಾರಿ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಗಗನಯಾತ್ರಿಗಳನ್ನು ವಾಪಾಸು ಕರೆತರಲು ಬೋಯಿಂಗ್ ನ ಕಟ್ಟಾ ಪ್ರತಿಸ್ಪರ್ಧಿ ಎನಿಸಿದ ಸ್ಪೇಸ್ಎಕ್ಸ್ ನ ನೆರವು ಪಡೆಯಲಿರುವುದು ಇತ್ತೀಚಿನ ವರ್ಷಗಳಲ್ಲಿ ನಾಸಾದ ಅತ್ಯಂತ ಪರಿಣಾಮಕಾರಕ ನಿರ್ಧಾರ ಎನಿಸಿದೆ. ಸ್ಟಾರ್ ಲೈನರ್ ಪ್ರೋಗ್ರಾಂ ಟೆಸ್ಟ್ ಮಿಷನ್ ಅನ್ನು ಮರು ಚಾಲನೆ ಮಾಡಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನು ಬೋಯಿಂಗ್ ಹೊಂದಿತ್ತು. 2016ರಿಂದೀಚೆಗೆ ಸಮಸ್ಯೆಯುಕ್ತ ಈ ವ್ಯವಸ್ಥೆಗೆ 160 ಕೋಟಿ ಡಾಲರ್ ವೆಚ್ಚ ಮಾಡಲಾಗಿದೆ.

ಬೋಯಿಂಗ್ ತನ್ನ ಅತ್ಯಂತ ಮಹತ್ವದ ಉತ್ಪನ್ನವಾದ ವಾಣಿಜ್ಯ ವಿಮಾನಗಳ ಉತ್ಪಾದನೆಯಲ್ಲೂ ಗುಣಮಟ್ಟ ಸಮಸ್ಯೆಗಳನ್ನು ಎದುರಿಸುತ್ತಿದೆ. ಮಾಜಿ ಸೇನಾ ಪರೀಕ್ಷಾ ಪೈಲಟ್ ಗಳಾದ ಹಿರಿಯ ನಾಸಾ ಗಗನಯಾತ್ರಿ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್, ಜೂನ್ 5ರಂದು ಸ್ಟಾರ್ ಲೈನರ್ ನಲ್ಲಿ ಐಎಸ್ಎಸ್ ಯಾನ ಕೈಗೊಂಡಿದ್ದು, ಇದು ಎಂಟು ದಿನಗಳ ಟೆಸ್ಟ್ ಮಿಷನ್ ಆಗಿತ್ತು. ಆದರೆ ಸ್ಟಾರ್ ಲೈನರ್ ನ ಪ್ರೊಪಲ್ಷನ್ ಸಿಸ್ಟಂ ಗಂಭೀರ ಸಮಸ್ಯೆಗಳನ್ನು ಐಎಸ್ಎಸ್ ಯಾನದ ಮೊದಲ 24 ಗಂಟೆಗಳಲ್ಲೇ ಎದುರಿಸಿತ್ತು. ಇದು ಪದೇ ಪದೇ ಹೆಚ್ಚಿನ ವಿಳಂಬಕ್ಕೆ ಕಾರಣವಾಗುತ್ತಿದೆ. ಇದರ 28 ಥ್ರಸ್ಟರ್ ಗಳ ಪೈಕಿ ಐದು ವಿಫಲವಾಗಿದ್ದು, ಥ್ರಸ್ಟರ್ ಗಳಿಗೆ ಒತ್ತಡ ನೀಡುವ ಹೀಲಿಯಂ ಸೋರಿಕೆ ದೊಡ್ಡ ಸಮಸ್ಯೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News