ಅಹ್ಮದಾಬಾದ್ | ಕಳ್ಳ ಸಾಗಣೆ ಮಾಡಲಾಗಿದ್ದ 90 ಕೆಜಿ ಚಿನ್ನ ವಶ

ಸಾಂದರ್ಭಿಕ ಚಿತ್ರ
ಅಹ್ಮದಾಬಾದ್: ಸೋಮವಾರ ರಾತ್ರಿ ಗುಜರಾತ್ ಪೋಲಿಸ್‌ನ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ವು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಸಹಯೋಗದೊಂದಿಗೆ ಇಲ್ಲಿ ನಡೆಸಿದ ದಾಳಿ ಕಾರ್ಯಾಚರಣೆಯಲ್ಲಿ ಕಳ್ಳ ಸಾಗಾಣಿಕೆ ಮಾಡಲಾಗಿತ್ತು ಎಂದು ಶಂಕಿಸಲಾದ 90 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.
ಅಹ್ಮದಾಬಾದ್‌ನ ಪಾಲ್ದಿ ಪ್ರದೇಶದಲ್ಲಿರುವ ಸ್ಟಾಕ್ ಬ್ರೋಕರ್ ಮಹೇಂದ್ರ ಶಾ ಅವರ ಪುತ್ರ ಮೇಘ ಶಾಗೆ ಸೇರಿದ ಫ್ಲ್ಯಾಟ್‌ನಿಂದ ಈ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಟಿಎಸ್ ಮತ್ತು ಡಿಆರ್‌ಐ ಮೂಲಗಳು ದೃಢಪಡಿಸಿವೆ.
ವಶಪಡಿಸಿಕೊಳ್ಳಲಾಗಿರುವ ಚಿನ್ನದ ನಿಖರ ಮೌಲ್ಯವನ್ನು ತಿಳಿಸಲು ಅಧಿಕಾರಿಗಳು ನಿರಾಕರಿಸಿದ್ದರೂ, ಅದು 80 ಕೋಟಿ ರೂ.ಗೂ ಅಧಿಕ ಎಂದು ಅಂದಾಜಿಸಲಾಗಿದೆ.
ಎಟಿಎಸ್ ಡಿಎಸ್‌ಪಿ ಎಸ್.ಎಲ್.ಚೌಧರಿಯವರಿಗೆ ಲಭಿಸಿದ ಗುಪ್ತಚರ ಮಾಹಿತಿ ಮೇರೆಗೆ ಸೋಮವಾರ ಬೆಳಿಗ್ಗೆ ಸ್ಥಳವನ್ನು ಗುರುತಿಸಿದ ಬಳಿಕ ಕಾರ್ಯಾಚರಣೆಯನ್ನು ಆರಂಭಿಸಿದ್ದು, ನಂತರ ಡಿಆರ್‌ಐನ ಅಹ್ಮದಾಬಾದ್ ವಲಯ ಘಟಕವು ಸೇರಿಕೊಂಡಿತ್ತು.
ಡಿಆರ್‌ಐ ಹೆಚ್ಚಿನ ಪ್ರಮಾಣದ ಚಿನ್ನ ಕಳ್ಳಸಾಗಣೆ ಅಪರಾಧಗಳನ್ನು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಹೊಂದಿರುವುದರಿಂದ ಅದನ್ನು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗಿತ್ತು. ಕಾರ್ಯಾಚರಣೆ ಸಂಜೆಯವರೆಗೂ ಮುಂದುವರಿದಿತ್ತು ಎಂದು ಎಟಿಎಸ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.