ಹುಲಿ ಹಲ್ಲು ಧರಿಸಿದ್ದ ಶಿವಸೇನೆ ಶಾಸಕನ ವಿರುದ್ಧ ಪ್ರಕರಣ ದಾಖಲು

Update: 2024-02-25 04:32 GMT

Photo: FB.com/ sanjaygaikwadofficial

ಬುಲ್ಡಾನಾ: 1987ರಲ್ಲಿ ತಾನು ಹುಲಿಯನ್ನು ಬೇಟೆಯಾಡಿದ್ದು, ಅದರ ಹಲ್ಲನ್ನು ಕೊರಳಲ್ಲಿ ಧರಿಸಿದ್ದೇನೆ ಎಂದು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ರಾಜ್ಯ ಅರಣ್ಯ ಇಲಾಖೆ ಗಾಯಕ್ವಾಡ್ ಅವರಿಂದ ಇದಕ್ಕೆ ಸಂಬಂಧಿಸಿದ ಇತರ ಭಾಗಗಳನ್ನು ವಶಪಡಿಸಿಕೊಂಡಿದೆ.

ಸಂಜಯ್ ಗಾಯಕ್ವಾಡ್ ಧರಿಸಿದ್ದರು ಎನ್ನಲಾದ ಹುಲಿಯ ಹಲ್ಲನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇದರ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಹೇಳಿದೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕ ಗಾಯಕ್ವಾಡ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ತಾನು ಹುಲಿಯನ್ನು ಬೇಟೆಯಾಡಿದ್ದಾಗಿ ಸ್ಪಷ್ಟಪಡಿಸಿದ್ದರು ಎಂದು ಬುಲ್ಡಾನಾ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೋಜ್ ಗಾವಸ್ ತಿಳಿಸಿದ್ದಾರೆ.

ಈ ವಿಡಿಯೊ ಪರಿಶೀಲಿಸಿದ ಅರಣ್ಯ ಇಲಾಖೆ, ಹುಲಿಯ ಹಲ್ಲನ್ನು ವಶಪಡಿಸಿಕೊಂಡಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬುಲ್ಡಾನಾ ವಲಯ ಅಧಿಕಾರಿ ಅಭಿಜಿತ್ ಠಾಕ್ರೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News