ಮದುವೆ ಮಂಟಪದ ಬುಕಿಂಗ್ ಕಚೇರಿಗೆ ಬಂದ ಚಿರತೆ ; ಸದ್ದಿಲ್ಲದೇ ಬಾಗಿಲು ಹಾಕಿ, ಸೆರೆ ಹಿಡಿದ ಬಾಲಕ!
ನಾಸಿಕ್ : ಮದುವೆ ಮಂಟಪದ ಬುಕಿಂಗ್ ಕಚೇರಿಯಲ್ಲಿ ಕುಳಿತು, ಮೊಬೈಲ್ ನಲ್ಲಿ ಆಟವಾಡುತ್ತಿದ್ದಾಗ ಒಳ ಪ್ರವೇಶಿಸಿದ ಚಿರತೆಯನ್ನು 12 ರ ಹರೆಯದ ಬಾಲಕ ಮೋಹಿತ್ ಅಹಿರೆ ಸದ್ದಿಲ್ಲದೇ ಬಾಗಿಲು ಹಾಕಿ ಸೆರೆ ಹಿಡಿದ ಘಟನೆ ಮಾಲೆಗಾಂವ್ – ನಾಮ್ ಪುರ್ ರಸ್ತೆಯ ಸಾಯಿ ಸೆಲೆಬ್ರೇಷನ್ ಮದುವೆ ಮಂಪಟದಲಿ ವರದಿಯಾಗಿದೆ. ಘಟನೆಯ ವೀಡಿಯೊ ವೈರಲಾಗಿದೆ.
ತನ್ನ ಹತ್ತಿರದಲ್ಲೇ ಚಿರತೆಯಿದ್ದರೂ, ಶೌರ್ಯ ಪ್ರದರ್ಶಿಸಿದ ಮದುವೆ ಮಂಟಪದ ಸೆಕ್ಯುರಿಟಿ ಗಾರ್ಡ್‌ನ ಮಗನಾದ ಅಹಿರೆ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಚಿರತೆ ಕಚೇರಿಗೆ ಪ್ರವೇಶಿಸಿದಾಗ ಕೇವಲ ಒಂದು ಅಡಿ ದೂರದಲ್ಲಿರುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ವರದಿಯಾಗಿದೆ ಎಂದು ತಿಳಿದು ಬಂದಿದೆ.
"ಚಿರತೆ ತುಂಬಾ ಹತ್ತಿರವಾಗಿತ್ತು. ಚಿರತೆ ಮತ್ತು ನನ್ನ ನಡುವೆ ಸ್ವಲ್ಪವೂ ಜಾಗವಿರಲಿಲ್ಲ. ಅದು ನನ್ನ ಮುಂದೆಯೇ ಕಚೇರಿಯ ಒಳಗಿನ ಕ್ಯಾಬಿನ್‌ಗೆ ಕಾಲಿಟ್ಟಿತು. ನನಗೆ ಭಯವಾಯಿತು. ಆದರೆ ನಾನು ಸದ್ದಿಲ್ಲದೆ ಬೆಂಚ್‌ನಿಂದ ಹೊರಬಂದೆ. ನನ್ನ ಹಿಂದೆ ಬಾಗಿಲು ಮುಚ್ಚಿದೆ ಚಿರತೆಯನ್ನು ಸೆರೆಹಿಡಿದೆ" ಎಂದು ಅಹಿರೆ timesofindia ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಮದುವೆ ಮಂಟಪದ ಮಾಲೀಕ ಅನಿಲ್ ಪವಾರ್, "ಬುಕಿಂಗ್ ಕಚೇರಿಯ ಆಯಾಮಗಳು 22 ಅಡಿ x 10 ಅಡಿ. ನಾವು ಕಚೇರಿಯಲ್ಲಿ ಎರಡು ವಿಭಾಗಗಳನ್ನು ರಚಿಸಿದ್ದೇವೆ. ಮೋಹಿತ್ ಅಹಿರೆ ಪ್ರವೇಶದ್ವಾರದ ಬಳಿ ಮೊದಲ ಕಂಪಾರ್ಟ್‌ಮೆಂಟ್‌ನಲ್ಲಿ ಕುಳಿತಿದ್ದರು. ಚಿರತೆ ನೇರವಾಗಿ ಒಳಗಿನ ಕ್ಯಾಬಿನ್ ಗೆ ಹೋಗಿದೆ. ಹೊರಗಿನ ಕ್ಯಾಬಿನ್ ನಲ್ಲಿರುವ ಹುಡುಗನನ್ನು ಚಿರತೆ ಗಮನಿಸಲಿಲ್ಲ. ಚಿರತೆಯು ಮೋಹಿತ್ ನಿಂದ ಕೇವಲ ಒಂದು ಅಡಿ ದೂರದಲ್ಲಿ ನಡೆದುಕೊಂಡು ಹೋಗುವುದನ್ನು ಕಂಡಾಗ ಹುಡುಗ ಶಾಂತವಾಗಿದ್ದನು. ಅದು ಒಳಗೋಗುತ್ತಿದ್ದಂತೆ ಅವನು ಕಛೇರಿಯಿಂದ ಹೊರಬಂದು ಹಿಂದೆ ಬಾಗಿಲು ಎಳೆದುಕೊಂಡನು” ಎಂದು ಹೇಳಿದರು.
ಮುಂಜಾನೆಯೇ ಸಮೀಪದ ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು ಎಂದು ಪವಾರ್ ಹೇಳಿದ್ದಾರೆ. ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಯೊಂದಿಗೆ ನಿವಾಸಿಗಳು ಅದನ್ನು ಪತ್ತೆಹಚ್ಚುವ ಕಾರ್ಯಾಚರಣೆ ಮಾಡುತ್ತಿದ್ದರು. ಕಚೇರಿಯೊಳಗೆ ಚಿರತೆಯನ್ನು ಹಿಡಿದಿರುವುದಾಗಿ ಅಹಿರೆ ತನ್ನ ತಂದೆಗೆ ತಿಳಿಸಿದ ನಂತರ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ನಾಗರಿಕರೊಂದಿಗೆ ಸ್ಥಳಕ್ಕೆ ಬಂದರು.
ಮಾಲೆಗಾಂವ್ ವಲಯ ಅರಣ್ಯಾಧಿಕಾರಿ ವೈಭವ್ ಹಿರೇ ಮಾತನಾಡಿ, ಮದುವೆ ಮಂಟಪದಲ್ಲಿ ಬಾಲಕ ಚಿರತೆಯನ್ನು ಸೆರೆಹಿಡಿದಾಗ ನಮ್ಮ ಸಿಬ್ಬಂದಿ ಸಮೀಪದಲ್ಲಿಯೇ ಇದ್ದರು. ಕೂಡಲೇ ನಾಸಿಕ್ ನಗರದಿಂದ ರಕ್ಷಣಾ ತಂಡಕ್ಕೆ ಕರೆ ಮಾಡಿ ಐದು ವರ್ಷದ ಗಂಡು ಚಿರತೆಯನ್ನು ಅರವಳಿಕೆ ನೀಡಿ ರಕ್ಷಿಸಲಾಯಿತು" ಎಂದರು.
ಈ ಪ್ರದೇಶದ ಸುತ್ತಲೂ ಅನೇಕ ಕೃಷಿ ಭೂಮಿಯಿದೆ. ಮೌಸಮ್ ನದಿಯೂ ಇದೇ ಪ್ರದೇಶದಿಂದ ಕೇವಲ ಒಂದೆರಡು ಕಿಲೋಮೀಟರ್ ದೂರದಲ್ಲಿ ಹರಿಯುತ್ತಿದೆ. ಹಾಗಾಗಿ ಈ ಹಿಂದೆಯೂ ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಅರಣ್ಯಾಧಿಕಾರಿ ವೈಭವ್ ಹಿರೇ ಹೇಳಿದರು.