ಮೋದಿಯನ್ನು ಶ್ಲಾಘಿಸಿದ ಆಚಾರ್ಯ ಪ್ರಮೋದ್ ಕೃಷ್ಣಂ ಕಾಂಗ್ರೆಸ್ ನಿಂದ ಉಚ್ಚಾಟನೆ

Update: 2024-02-11 02:36 GMT

Photo: ANI

ಲಕ್ನೊ; ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ ಮತ್ತು ಕಾರ್ಯಕ್ರಮಕ್ಕೆ ಗೈರುಹಾಜರಾದ ಕಾಂಗ್ರೆಸ್ ನಡೆಯನ್ನು ಖಂಡಿಸಿದ ಹಿರಿಯ ಮುಖಂಡ ಆಚಾರ್ಯ ಪ್ರಮೋದ್ ಕೃಷ್ಣಂ ಅವರನ್ನು ಕಾಂಗ್ರೆಸ್ ನಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ಅಶಿಸ್ತಿನ ಕಾರಣಕ್ಕೆ ಮತ್ತು ಪದೇ ಪದೇ ಪಕ್ಷದ ವಿರುದ್ಧ ಹೇಳಿಕೆ ನೀಡಿದ ಆರೋಪದಲ್ಲಿ ಆಚಾರ್ಯ ಪ್ರಮೋದ್ ಕೃಷ್ಣಂ ಅವರನ್ನು ಉಚ್ಚಾಟಿಸಲಾಗಿದೆ ಎಂದು ಪಕ್ಷ ಹೇಳಿಕೆ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಲಕ್ನೋ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಮೋದ್ ಕೃಷ್ಣಂ ಸೋಲು ಅನುಭವಿಸಿದ್ದರು. ಆದರೂ, 1.8 ಲಕ್ಷ ಮತ ಪಡೆಯುವ ಮೂಲಕ ಗಮನ ಸೆಳೆದಿದ್ದರು.

2014ರ ಚುನಾವಣೆಯಲ್ಲಿ ಕೂಡಾ ಉತ್ತರಪ್ರದೇಶದ ಸಂಭಾಲ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಅವರ ಕನಸು ಭಗ್ನಗೊಂಡಿತ್ತು. ಇದಕ್ಕೂ ಮುನ್ನ ಆಚಾರ್ಯ ಪ್ರಮೋದ್ ಅವರು ಪಕ್ಷದ ಉತ್ತರ ಪ್ರದೇಶ ಉಸ್ತುವಾರಿ ಹೊಂದಿದ ಪ್ರಿಯಾಂಕಾ ಗಾಂಧಿಯವರಿಗೆ ಸಲಹೆ ನೀಡಲು ರಚಿಸಿದ್ದ ಕಾಂಗ್ರೆಸ್ ನ ಉತ್ತರ ಪ್ರದೇಶ ಸಲಹಾ ಮಂಡಳಿಯ ಭಾಗವಾಗಿದ್ದರು. ತಾವು ಕಣ್ಣಿಟ್ಟಿದ್ದ ಸಂಭಾಲ್ ಮತ್ತು ಲಕ್ನೋ ಕ್ಷೇತ್ರಗಳಿಗೆ ಸಮಾಜವಾದಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತಯಾರಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಈ ಉಚ್ಚಾಟನೆ ವಿಶೇಷ ಮಹತ್ವ ಪಡೆದಿದೆ.

ಸಂಭಾಲ್ ಜಿಲ್ಲೆಯ ಕಲ್ಕಿಧಾಮದಲ್ಲಿ ಫೆಬ್ರವರಿ 19ರಂದು ನಡೆಯಲಿರುವ ಶಿಲಾನ್ಯಾಸ ಸಮಾರಂಭಕ್ಕೆ ಆಚಾರ್ಯ ಪ್ರಮೋದ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಿದ್ದರು. ಇಲ್ಲಿ ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನೂ ಆಚಾರ್ಯ ಪ್ರಮೋದ್ ಭೇಟಿಯಾಗಿದ್ದರು. ಆದರೆ ಯಾವ ನಿರ್ದಿಷ್ಟ ಕಾರಣಕ್ಕೆ ಅವರನ್ನು ಉಚ್ಚಾಸಲಾಗಿದೆ ಎನ್ನುವುದನ್ನು ಕಾಂಗ್ರೆಸ್ ಬಹಿರಂಗಪಡಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News