ಪತ್ರಕರ್ತೆಯೊಂದಿಗೆ ಅನುಚಿತ ವರ್ತನೆ: ಕ್ಷಮೆಯಾಚಿಸಿದ ನಟ, ಬಿಜೆಪಿ ಮುಖಂಡ ಸುರೇಶ್‌ ಗೋಪಿ

Update: 2023-10-28 15:21 GMT

ಸುರೇಶ್‌ ಗೋಪಿ (Photo:telegraphindia.com)

ಕೊಚ್ಚಿ: ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಹಿಳಾ ವರದಿಗಾರ್ತಿಯೊಬ್ಬರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆಂಬ ಆರೋಪಗಳನ್ನು ಎದುರಿಸುತ್ತಿರುವ ಮಲಯಾಳಂನ ಜನಪ್ರಿಯ ಚಿತ್ರನಟ ಹಾಗೂ ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಅವರು ಈ ಬಗ್ಗೆ ಶನಿವಾರ ಕ್ಷಮೆಯಾಚಿಸಿದ್ದಾರೆ.

“ತನ್ನ ಜೀವಮಾನದಲ್ಲಿ ತಾನು ಯಾರೊಂದಿಗೂ ಅವಮಾನಕರವಾಗಿ ವರ್ತಿಸಿಲ್ಲ ಹಾಗೂ ಯಾರೊಂದಿಗೂ ಅಗೌರವದಿಂದ ನಡೆದುಕೊಂಡಿಲ್ಲ. ಆದರೆ ಒಂದು ವೇಳೆ ನನ್ನ ನಡವಳಿಕೆಯಿಂದ ವರದಿಗಾರ್ತಿಯು ಯಾವುದೇ ರೀತಿಯ ಮಾನಸಿಕ ವೇದನೆಗೆ ಒಳಗಾಗಿದ್ದಲ್ಲಿ ಆ ಬಗ್ಗೆ ತಾನು ಕ್ಷಮೆಯಾಚಿಸುತ್ತೇನೆ’’ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ವರದಿಗಾರ್ತಿಯನ್ನು ಯಾವುದೇ ಕೆಟ್ಟ ಉದ್ದೇಶದೊಂದಿಗೆ ಸ್ಪರ್ಶಿಸಿರಲಿಲ್ಲ ಹಾಗೂ ಆಕೆಯನ್ನು ತನ್ನ ಮಗಳಿಗೆ ಸಮಾನವಾಗಿ ಕಂಡಿದ್ದೇನೆ ಎಂದವರು ಹೇಳಿದ್ದಾರೆ.

“ ಒಂದು ವೇಳೆ ನಾನು ಅನುಚಿತವಾಗಿ ಆಕೆಯನ್ನು ಸ್ಪರ್ಶಿಸಿದ್ದೇನೆ ಎಂದು ಆಕೆ ಭಾವಿಸಿದ್ದೇ ಆದಲ್ಲಿ ತಂದೆಯಂತೆ ನಾನು ಆಕೆಯೊಂದಿಗೆ ಕ್ಷಮೆ ಯಾಚಿಸುವೆ ಎಂದವರು ಹೇಳಿದ್ದಾರೆ.

ಸುರೇಶ್‌ಗೋಪಿ ಅವರು ವಿವಾದಿತ ಘಟನೆಯನ್ನು ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿವರಿಸಿದ್ದು, ‘‘ವರದಿಗಾರರೊಂದಿಗೆ ಮಾತನಾಡಿದ ಬಳಿಕ ನಾನು ಸ್ಥಳದಿಂದ ಹೊರಹೋಗುತ್ತಿದ್ದೆ. ಆದರೆ ಈ ಮಹಿಳೆ ನನ್ನ ದಾರಿಗೆ ಅಡ್ಡವಾಗಿ ನಿಂತಿದ್ದಳು. ಆಗ ನನಗೆ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ. ಕ್ಷಮೆಯಾಚಿಸಲು ನಾನು ವರದಿಗಾರ್ತಿಯನ್ನು ದೂರವಾಣಿ ಮೂಲಕ ಸಂಪರ್ಕಿಸಲು ಬಯಸಿದ್ದೆ. ಆದರೆ ನನ್ನ ಕರೆಯನ್ನು ಆಕೆ ಸ್ವೀಕರಿಸಲಿಲ್ಲ. ಒಂದು ವೇಳೆ ಆಕೆ ನನ್ನ ವಿರುದ್ಧ ಕಾನೂನುಕ್ರಮ ಕೈಗೊಂಡಲ್ಲಿ ನಾನೇನು ಮಾಡಲು ಸಾಧ.?. ನನಗೆ ಮೂವರು ಹೆಣ್ಣು ಮಕ್ಕಳಿದ್ದಾರೆ ಹಾಗೂ ನಾನು ತಂದೆಯಂತೆ ವರ್ತಿಸಿದ್ದೇನೆ’’ ಎಂದು ಸುರೇಶ್‌ಗೋಪಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ಹೇಳಿಕೆಯೊಂದನ್ನು ನೀಡಿ, ಸುರೇಶ್ ಗೋಪಿ ಅವರ ವರ್ತನೆಯು ಅನುಚಿತವಾದುದು ಎಂದು ಹೇಳಿದೆ ಹಾಗೂ ಅವರ ವಿರುದ್ಧ ಮಹಿಳಾ ಆಯೋಗಕ್ಕೆ ದೂರ ನೀಡಲು ಯೋಚಿಸುತ್ತಿರುವುದಾಗಿ ಹೇಳಿದೆ

ಕೋಝಿಕ್ಕೋಡ್‌ನಲ್ಲಿ ಪತ್ರಿಕಾಗೋಷ್ಠಿಯೊಂದರ ಬಳಿಕ ಸುರೇಶ್ ಗೋಪಿ ಅವರು ಪತ್ರಕರ್ತೆಯೊಬ್ಬಳ ಹೆಗಲಿಗೆ ತನ್ನ ಕೈಯನ್ನು ಇರಿಸಿದಾಗ, ಆಕೆ ತಳ್ಳಿರುವುದನ್ನು ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಬಳಿಕ ಈ ವಿವಾದ ಭುಗಿಲೆದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News