ಬಬಿತಾ- ಸಾಕ್ಷಿ ಬಳಿಕ ಮತ್ತಿಬ್ಬರು ಕುಸ್ತಿಪಟುಗಳ ಟ್ವೀಟ್ ಸಮರ

Update: 2023-06-24 02:49 GMT

PTI

ಹೊಸದಿಲ್ಲಿ: ಭಾರತದ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿ ಮಲಿಕ್ ಮತ್ತು ಬಬಿತಾ ಫೋಗಟ್ ನಡುವೆ ಟ್ವೀಟ್ ಸಮರ ನಡೆದ ಬೆನ್ನಲ್ಲೇ ವಿನೇಶ್ ಫೋಗಟ್ ಮತ್ತು ಯೋಗೇಶ್ವರ ದತ್ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕಾಳಗ ಆರಂಭವಾಗಿದೆ. ಆರು ಮಂದಿ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ವನ್ ಬೌಟ್ ಏಷ್ಯಾಡ್ ಆಯ್ಕೆ ಪ್ರಕ್ರಿಯೆ ನಡೆಸಲು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ನೇತೃತ್ವದ ತಾತ್ಕಾಲಿಕ ಸಮಿತಿ ನಿರ್ಧರಿಸಿರುವುದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಉಭಯ ಕುಸ್ತಿಪಟುಗಳು ಸಾಮಾಜಿ ಜಾಲತಾಣದಲ್ಲಿ ಸಮರ ಆರಂಭಿಸಿದ್ದಾರೆ.

ಬಿಜೆಪಿ ಟಿಕೆಟ್ನಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಯೋಗೇಶ್ವರ್ ದತ್ ಆರು ನಿಮಿಷ ಅವಧಿಯ ವಿಡಿಯೊ ಟ್ವೀಟ್ ಮಾಡಿ, ಆರು ಮಂದಿ ಕುಸ್ತಿಪಟುಗಳಿಗೆ ವಿನಾಯ್ತಿ ನೀಡಿರುವುದನ್ನು ಪ್ರಶ್ನಿಸಿದ್ದು, ವಿವಾದದ ಮೂಲ. ತಾತ್ಕಾಲಿಕ ಸಮಿತಿ ಕಿರಿಯ ಕುಸ್ತಿಪಟುಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ದತ್ ಆಪಾದಿಸಿದ್ದರು.

"ತಾತ್ಕಾಲಿಕ ಸಮಿತಿಯ ಆಯ್ಕೆ ಪರೀಕ್ಷೆಗೆ ಮಾನದಂಡ ಏನು ಎನ್ನುವುದು ಅರ್ಥವಾಗುತ್ತಿಲ್ಲ. ಲೈಂಗಿಕ ಕಿರುಕುಳದ ಬಗ್ಗೆ ವರದಿ ಮಾಡಲು ಪ್ರತಿಭಟನೆ ನಡೆಸಲಾಗಿದೆಯೇ ಅಥವಾ ಈ ವಿನಾಯ್ತಿ ಪಡೆಯುವುದಕ್ಕಾಗಿಯೇ? ಆಯ್ಕೆ ಪರೀಕ್ಷೆಯಿಂದ ವಿನಾಯ್ತಿ ಕೋರಿ ಈ ಕುಸ್ತಿಪಟುಗಳು ಐಓಸಿ ಸಮಿತಿಗೆ ಪತ್ರ ಬರೆದಿದ್ದರು. ಲೈಂಗಿಕ ಕಿರುಕುಳ ಹಗರಣ ನ್ಯಾಯಾಲಯದಲ್ಲಿದೆ. ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗುತ್ತಾರೆ. ಈ ಆರು ಮಂದಿ ಒಂದು ವರ್ಷದಿಂದ ಕುಸ್ತಿ ಕಣದಿಂದ ದೂರ ಇದ್ದಾರೆ. ಆದ್ದರಿಂದ ಇದು ತಪ್ಪು" ಎಂದು ದತ್ ವಾದಿಸಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿನೇಶ್, "ಬ್ರಿಜ್ಭೂಷಣ್ ಪ್ಲೇಟ್ನಲ್ಲಿ ತಿಂದು ಬಿಟ್ಟದ್ದನ್ನು ಯೋಗೇಶ್ವರ್ ತಿನ್ನುತ್ತಿದ್ದಾರೆ ಎನ್ನುವುದನ್ನು ಇಡೀ ಕುಸ್ತಿ ಜಗತ್ತು ಅರಿತಿದೆ. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಯಾರೇ ಧ್ವನಿ ಎತ್ತಿದರೆ, ಯೋಗೇಶ್ವರ್ಗೆ ವಾಂತಿ ಬರುತ್ತದೆ. ಬೃಜ್ಭೂಷಣ್ ಅವರ ಪಾದ ನೆಕ್ಕುವ ಕಾರಣಕ್ಕಾಗಿ ಮತ್ತು ನಿಮ್ಮದೇ ಬಳಗಕ್ಕೆ ವಿಶ್ವಾಸದ್ರೋಹ ಎಸಗಿದ್ದಕ್ಕೆ ಕುಸ್ತಿ ಜಗತ್ತು ನಿಮ್ಮನ್ನು ನೆನಪಿಸಿಕೊಳ್ಳುತ್ತದೆ" ಎಂದು ತಮ್ಮ ಅಧಿಕೃತ ಟ್ವಿಟ್ಟರ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.




Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News