ಭದ್ರತಾ ಲೋಪದ ಬಳಿಕ ಇನ್ನು ಸಂಸತ್ತಿಗೆ ಸಿಐಎಸ್ಎಫ್ ಕಾವಲು

Update: 2023-12-22 02:46 GMT

Photo:PTI

ಹೊಸದಿಲ್ಲಿ: ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ, ದೆಹಲಿ ಮೆಟ್ರೊ ಮತ್ತು ಹೆಚ್ಚು ಜನ ಭೇಟಿ ನೀಡುವ ಸ್ಮಾರಕಗಳು ಸೇರಿದಂತೆ ಇತರ ಪ್ರಮುಖ ಸ್ಥಾವರಗಳಲ್ಲಿ ಪ್ರವೇಶ ನಿಯಂತ್ರಣ, ಶೋಧನೆ ಮತ್ತು ಸ್ಕ್ಯಾನಿಂಗ್ ನಲ್ಲಿ ನೈಪುಣ್ಯ ಹೊಂದಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಇದೀಗ ಸಂಸತ್ತಿನ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಸಾಧ್ಯತೆ ಇದೆ.

ಲೋಕಸಭೆಯ ಸರ್ಪಗಾವಲನ್ನು ಬೇಧಿಸಿ ಪ್ರೇಕ್ಷಕರ ಗ್ಯಾಲರಿಯಿಂದ ಲೋಕಸಭೆ ಚೇಂಬರ್ ಗೆ ಇಬ್ಬರು ವ್ಯಕ್ತಿಗಳು ಹಾರಿದ ಘಟನೆಯ ಬೆನ್ನಲ್ಲೇ ಸಿಐಎಸ್ಎಫ್ ಯೋಧರನ್ನು ನೇಮಿಸುವ ಪ್ರಸ್ತಾವ ಚಾಲನೆ ಪಡೆದಿದೆ.

ಸಂಸತ್ ಆವರಣ ಮತ್ತು ಕಟ್ಟಡಕ್ಕೆ ಸಿಐಎಸ್ಎಫ್ ನ ಭದ್ರತೆ ಮತ್ತು ಅಗ್ನಿಶಾಮಕ ವಿಭಾಗದ ಸಿಬ್ಬಂದಿಯನ್ನು ಖಾಯಂ ಆಗಿ ನಿಯೋಜಿಸುವ ಪ್ರಸ್ತಾವನೆಗೆ ಗೃಹ ವ್ಯವಹಾರಗಳ ಸಚಿವಾಲಯ ತಾತ್ವಿಕ ಒಪ್ಪಿಗೆ ನೀಡಿದೆ. ಈಗಾಗಲೇ 358 ಸಂಸ್ಥೆಗಳಿಗೆ ರಕ್ಷಣಾ ವ್ಯವಸ್ಥೆ ಮತ್ತು ವಿಐಪಿ ಭದ್ರತಾ ವ್ಯವಸ್ಥೆ ಕಲ್ಪಿಸಿರುವ ಸಿಐಎಸ್ಎಫ್ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ನಡೆಸಿದ ಜಂಟಿ ಸಮೀಕ್ಷೆಯಲ್ಲಿ, ಹಾಲಿ ಇರುವ ಭದ್ರತಾ ಸೌಲಭ್ಯಗಳನ್ನು ಅಂದಾಜಿಸಿ, ಸಮಗ್ರ ಯೋಜನೆಯನ್ನು ಸಿದ್ಧಪಡಿಸಲಿದೆ. ಇದು ಸಿಐಎಸ್ಎಫ್ ನಿಯೋಜನೆಯ ಪೂರ್ವಭಾವಿ ಪ್ರಕ್ರಿಯೆಯಾಗಿರುತ್ತದೆ.

ಸಿಐಎಸ್ಎಫ್ ಭದ್ರತಾ ಯೋಜನೆ ಮತ್ತು ನಿಯೋಜನೆಯ ಅಂತಿಮ ಅನುಮೋದನೆ, ಲೋಕಸಭೆಯ ಭದ್ರತಾ ವ್ಯವಸ್ಥೆಯ ಮೇಲುಸ್ತುವಾರಿ ಹೊಣೆ ಹೊಂದಿರುವ ಲೋಕಸಭಾ ಸೆಕ್ರೆಟ್ರಿಯೇಟ್ ನಿಂದ ದೊರಕಲಿದೆ. ಇದೀಗ ಸಂಸತ್ತಿನ ಭದ್ರತಾ ಸೇವೆಯ ಹೊಣೆ ದೆಹಲಿ ಪೊಲೀಸ್, ಸಿಆರ್ ಪಿಎಫ್ ಮತ್ತು ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್ ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News