ಹಂದಿಗಳಿಂದ ಬೆಳೆ ಹಾನಿ ಆರೋಪ: ಇಬ್ಬರು ಮಹಿಳೆಯರ ಸಹಿತ ಮೂವರ ಥಳಿಸಿ ಹತ್ಯೆ
ರಾಂಚಿ: ಹಂದಿಗಳು ಬೆಳೆ ಹಾನಿ ಮಾಡಿವೆ ಎಂದು ಆರೋಪಿಸಿ ಸುಮಾರು 10 ಜನರ ಗುಂಪೊಂದು ಇಬ್ಬರು ಮಹಿಳೆಯರ ಸಹಿತ ಮೂವರನ್ನು ಥಳಿಸಿ ಹತ್ಯೆಗೈದ ಅಮಾನವೀಯ ಘಟನೆ ರಾಂಚಿಯ ಝಂಝಿ ಟೋಲಾ ಗ್ರಾಮದಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಕೆಲವು ದಿನಗಳ ಹಿಂದೆ ಒಂದು ಕುಟುಂಬಕ್ಕೆ ಸೇರಿದ ಹಂದಿಗಳು ಅವರ ಸಂಬಂಧಿಕರಿಗೆ ಸೇರಿದ ಬೆಳೆಗೆ ಹಾನಿ ಉಂಟು ಮಾಡಿದ್ದವು ಎಂದು ಆರೋಪಿಸಲಾಗಿದೆ. ಈ ವಿಷಯದ ಕುರಿತಂತೆ ಎರಡು ಕುಟುಂಬಗಳ ನಡುವೆ ವಿವಾದ ಉದ್ಭವಿಸಿತ್ತು. ಗುರುವಾರ ಸುಮಾರು 11 ಗಂಟೆಗೆ 10 ಜನರಿದ್ದ ಗುಂಪು ದೊಣ್ಣೆ ಹಾಗೂ ಕೃಷಿ ಸಲಕರಣೆಗಳಿಂದ ಇನ್ನೊಂದು ಕುಟುಂಬದ ಮೇಲೆ ದಾಳಿ ನಡೆಸಿತು ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಥಳಿಸಿ ಹತ್ಯೆಗೈದಿತು’’ ಎಂದು ಎಂದು ರಾಂಚಿ ಗ್ರಾಮೀಣ ಪೊಲೀಸ್ ಅಧೀಕ್ಷಕ ಹಾರಿಸ್ ಬಿನ್ ಝಮಾನ್ ತಿಳಿಸಿದ್ದಾರೆ.
ಮೃತಪಟ್ಟವರನ್ನು ಜಾನೇಶ್ವರ್ ಬೇಡಿಯಾ (42), ಸರಿತಾ ದೇವಿ (39) ಹಾಗೂ ಸಂಜು ದೇವಿ (25) ಎಂದು ಗುರುತಿಸಲಾಗಿದೆ.
ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲು ಪೊಲೀಸರು ತಂಡವೊಂದನ್ನು ರೂಪಿಸಿದ್ದಾರೆ. ಪ್ರತ್ಯಕ್ಷ ಸಾಕ್ಷಿಗಳು ಹಾಗೂ ಸಂತ್ರಸ್ತ ಕುಟುಂಬದ ಇತರ ಸದಸ್ಯರು ಗುರುತಿಸಿದ ಬಳಿಕ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಝಮಾನ್ ತಿಳಿಸಿದ್ದಾರೆ.