ಪಕ್ಷಾಂತರ ಮಾಡುವಂತೆ ʼಆಪ್ʼ ಶಾಸಕರಿಗೆ ಆಮಿಷ ಆರೋಪ: ದಿಲ್ಲಿ ಪೊಲೀಸರಿಂದ ಕೇಜ್ರಿವಾಲ್‌ಗೆ ನೋಟಿಸ್
ಹೊಸದಿಲ್ಲಿ : ಎಕ್ಸ್ ಪೋಸ್ಟ್‌ನಲ್ಲಿ, ಕೇಜ್ರಿವಾಲ್ ಕಳೆದ ವಾರ ತಮ್ಮ ಪಕ್ಷದ ಏಳು ಶಾಸಕರನ್ನು ಬಿಜೆಪಿ ಸಂಪರ್ಕಿಸಿತ್ತು ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆಗೆ ದಿಲ್ಲಿ ಪೊಲೀಸ್ ಕ್ರೈಂ ಬ್ರಾಂಚ್ ತಂಡವು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿದ್ದು, ಅವರ ಹೇಳಿಕೆಯ ತನಿಖೆಗೆ ಸಂಬಂಧಿಸಿದಂತೆ ನೋಟಿಸ್ ನೀಡಲಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ರಾತ್ರಿ ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕ್ರೈಂ ಬ್ರಾಂಚ್ ಅಧಿಕಾರಿಗಳ ತಂಡ ಕೇಜ್ರಿವಾಲ್ ಅವರ ನಿವಾಸಕ್ಕೆ ತಲುಪಿದ್ದು, ವಿಚಾರಣೆಗೆ ಸಂಬಂಧಿಸಿದ ನೋಟಿಸ್ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಕೇಜ್ರಿವಾಲ್ ಅವರ ಆರೋಪದ ನಂತರ, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು, "ಕೇಜ್ರಿವಾಲ್ ರಾಜಕೀಯವಾಗಿ ಎಷ್ಟು ಹತಾಶರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಅವರ ಈ ಆಧಾರರಹಿತ ಆರೋಪವು ರಾಜಕೀಯವಾಗಿ ಜೀವಂತವಾಗಿರಿಸಿಕೊಳ್ಳುವ ಪ್ರಯತ್ನವಾಗಿದೆ. ದಿಲ್ಲಿಯಲ್ಲಿ 70 ಶಾಸಕರಲ್ಲಿ 62 ಶಾಸಕರನ್ನು ಹೊಂದಿರುವ ಆಡಳಿತಾರೂಢ ಎಎಪಿ ಅವರ ಮಾನಸಿಕ ದಿವಾಳಿತನವನ್ನು ತೋರಿಸುತ್ತದೆ” ಎಂದು ಹೇಳಿದ್ದರು.