ವಿಶ್ವದ ಶ್ರೀಮಂತ ರಾಷ್ಟ್ರ ಅಮೆರಿಕವಲ್ಲ; ಭಾರತದ ಸ್ಥಾನ ಎಲ್ಲಿದೆ ಗೊತ್ತೇ?
ಹೊಸದಿಲ್ಲಿ: ಅಮೆರಿಕ ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರ ಎಂಬ ಭಾವನೆಯನ್ನು ನೀವು ಹೊಂದಿದ್ದರೆ ಅದು ತಪ್ಪು. ತಲಾದಾಯ ಆಧಾರದಲ್ಲಿ ಬಿಡುಗಡೆ ಮಾಡಿರುವ ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಲಕ್ಸಂಬರ್ಗ್, ಅಮೆರಿಕದ 1.5 ಪಟ್ಟು ತಲಾದಾಯವನ್ನು ಹೊಂದಿದೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆ ಹೊಂದಿರುವ ಭಾರತ ಈ ಪಟ್ಟಿಯಲ್ಲಿ ಎಲ್ಲಿದೆ ಎಂಬ ಕುತೂಹಲಕರ ಮಾಹಿತಿ ಇಲ್ಲಿದೆ.
ಐಎಂಎಫ್ ನ ವಿಶ್ವ ಆರ್ಥಿಕ ದೃಷ್ಟಿಕೋನ-2024ರ ಅಂಕಿ ಅಂಶಗಳಿಂದ ಇಂಥ ಹಲವು ಸ್ವಾರಸ್ಯಕರ ಮಾಹಿತಿಗಳು ಲಭ್ಯವಾಗಿವೆ. ಲಕ್ಸಂಬರ್ಗ್ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದು, 2024ರಲ್ಲಿ ಇಲ್ಲಿನ ತಲಾದಾಯ 1,43,742.69 ಡಾಲರ್ ಎಂದು ಐಎಂಎಫ್ ಅಂದಾಜಿಸಿದೆ.
ಯೂರೋಪಿಯನ್ ಒಕ್ಕೂಟದ ಸದಸ್ಯರಾಷ್ಟ್ರವಾಗಿರುವ ಐರ್ಲೆಂಡ್ (1.34 ಲಕ್ಷ ಡಾಲರ್) ಎರಡನೇ ಸ್ಥಾನದಲ್ಲಿದೆ. ಸಿಂಗಾಪುರ (1.33 ಲಕ್ಷ ಡಾಲರ್), ಮಕಾವೊ ಎಸ್ಎಆರ್ (1.31 ಲಕ್ಷ ಡಾಲರ್), ಕತಾರ್ (1.12 ಲಕ್ಷ), ಯುನೈಟೆಡ್ ಅರಬ್ ಎಮಿರೇಟ್ಸ್ (96,845), ಸ್ವಿಡ್ಜರ್ಲೆಂಡ್ (91,931), ಸ್ಯಾಣ್ ಮರಿನೊ (86,988) ನಂತರದ ಸ್ಥಾನಗಳಲ್ಲಿವೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಶ್ರೀಮಂತ ರಾಷ್ಟ್ರಗಳ ಸಾಲಿನಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದು, ಇಲ್ಲಿನ ತಲಾದಾಯ 85,372.686 ಡಾಲರ್ ಎಂದು ಅಂದಾಜಿಸಲಾಗಿದೆ. 82,831 ಡಾಲರ್ ಆದಾಯದ ನಾರ್ವೆ 10ನೇ ಸ್ಥಾನದಲ್ಲಿದೆ.
ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಭಾರತ 129ನೇ ಸ್ಥಾನದಲ್ಲಿದ್ದು, ದೇಶದ ತಲಾದಾಯ 10,122.951 ಡಾಲರ್!