ಜಾತಿ ಗಣತಿಗೆ ವಿರೋಧ ಪಕ್ಷಗಳ ಒತ್ತಡದ ನಡುವೆ ಟಿಡಿಪಿಯಿಂದ ಕೌಶಲ ಗಣತಿಗೆ ಆಗ್ರಹ
ಹೊಸದಿಲ್ಲಿ: ರಾಜ್ಯದಲ್ಲಿ ಕೌಶಲ ಗಣತಿಯನ್ನು ಆರಂಭಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ಎನ್ ಡಿಎ ಘಟಕ ಪಕ್ಷವಾದ ಟಿಡಿಪಿ ನಾಯಕ ಎನ್.ಚಂದ್ರಬಾಬು ನಾಯ್ಡು ಅವರು, ಪ್ರಧಾನಿ ನರೇಂದ್ರ ಮೋದಿಯವರು ಇಂಥದ್ದೇ ಗಣತಿಯನ್ನು ದೇಶಾದ್ಯಂತ ಕೈಗೊಳ್ಳಬೇಕು. ದೇಶದಲ್ಲಿ ಮಾನವ ಬಂಡವಾಳವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಜನರಲ್ಲಿ ಲಭ್ಯವಿರುವ ಕೌಶಲವನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.
ಒಂದೆಡೆ ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಜಾತಿ ಗಣತಿಗೆ ಆಗ್ರಹ ಮಂಡಿಸಿದ್ದರೆ, ಪ್ರಜೆಗಳಿಗಾಗಿ ಉತ್ತಮ ಫಲಿತಾಂಶವನ್ನು ಸೃಷ್ಟಿಸುವ ಉದ್ದೇಶದಿಂದ "ಸರ್ಕಾರಿ, ಖಾಸಗಿ, ಜನರ ಸಹಭಾಗಿತ್ವ"ವನ್ನು ವಿಸ್ತರಿಸುವ ಕ್ರಮ ಇದಾಗಿದೆ ಎಂದು ನಾಯ್ಡು ಪ್ರತಿಪಾದಿಸಿದ್ದಾರೆ.
ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಮೋದಿ ಸರ್ಕಾರದ ಪ್ರಮುಖ ಆಶಯವಾಗಿದ್ದು, ಕೇಂದ್ರ ಬಜೆಟ್ ನಲ್ಲಿ ಈ ಸಂಬಂಧ ಕ್ರಮಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
ರಾಜಧಾನಿಯಲ್ಲಿ ಸರಣಿ ಸಭೆಗಳನ್ನು ನಡೆಸಿದ ಟಿಡಿಪಿ ಮುಖ್ಯಸ್ಥ, "ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರಾಜ್ಯದಲ್ಲಿ ತೀವ್ರ ಹಣಕಾಸು ಒತ್ತಡವನ್ನು ಬಿಟ್ಟುಹೋದ ಬಳಿಕ ಆಂಧ್ರಪ್ರದೇಶದ ಅಭಿವೃದ್ಧಿ ನನ್ನ ಪ್ರಥಮ ಆದ್ಯತೆ" ಎಂದು ಸ್ಪಷ್ಟಪಡಿಸಿದರು. ಒತ್ತಡ ಹಾಗೂ ಅಭಿವೃದ್ಧಿಯ ಅಭಾವವನ್ನು ಬಿಂಬಿಸಲು ಹೊರಟಿರುವ ನಾಯ್ಡು, ಪೊಲವರಂ ನೀರಾವರಿ ಯೋಜನೆ ಮತ್ತು ಅಮರಾವತಿಯನ್ನು ರಾಜ್ಯ ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ತಮ್ಮ ಯೋಜನೆ ನನೆಗುದಿಗೆ ಬಿದ್ದಿರುವುದನ್ನು ಐದು ಶ್ವೇತಪತ್ರಗಳ ಮೂಲಕ ಜನತೆಯ ಮುಂದಿಡಲು ನಿರ್ಧರಿಸಿದ್ದಾರೆ.
"ಏನು ಆಗಬೇಕು ಎನ್ನುವುದನ್ನು ಜನತೆ ನಿರ್ಧರಿಸಲಿ" ಎಂದು ಹೇಳಿರುವ ಅವರು, ಆಂಧ್ರಪ್ರದೇಶ ಮತ್ತೆ ಅಭಿವೃದ್ಧಿಯ ಹಳಿಗೆ ತೆರಳುವ ನಿಟ್ಟಿನಲ್ಲಿ ದೇಶೀಯ ಹಾಗೂ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ತಮ್ಮ ಹಿಂದಿನ ಅನುಭವವನ್ನು ಬಳಸಿಕೊಳ್ಳಲಿದ್ದಾರೆ. ಕೇಂದ್ರ ಸಚಿವರ ಜತೆಗೆ ನಾಯ್ಡು ಹಲವು ಮಂದಿ ಉದ್ಯಮಿಗಳನ್ನು ಕೂಡಾ ಭೇಟಿ ಮಾಡಿ ಮಾತುಕತೆ ನಡೆಸಿದರು.