ಆಂಧ್ರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೊಬೈಲ್ ಫ್ಲ್ಯಾಶ್‌ಲೈಟ್ ಬಳಸಿ ರೋಗಿಗೆ ಚಿಕಿತ್ಸೆ; ವೀಡಿಯೋ ವೈರಲ್
ಹೈದರಾಬಾದ್: ವಿದ್ಯುತ್ ಕಡಿತದ ಸಂದರ್ಭ ಮೊಬೈಲ್ ಫ್ಲ್ಯಾಶ್‌ಲೈಟ್ ಬೆಳಕಿನಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬನಿಗೆ ಸರಕಾರಿ ಆಸ್ಪತ್ರೆಯೊಂದರಲ್ಲಿ ಅಲ್ಲಿನ ಸಿಬ್ಬಂದಿ ಚಿಕಿತ್ಸೆ ನೀಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಕಳೆದ ಶುಕ್ರವಾರ ಕುರುಪಂ ಮಂಡಲದ ಮಾನ್ಯಂ ಜಿಲ್ಲೆಯ ಪಾರ್ವತಿಪುರಂ ಎಂಬಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ವೀಡಿಯೋ ಶೇರ್ ಮಾಡಿದ ವಿಪಕ್ಷ ನಾಯಕ ಹಾಗೂ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು. “ರಾಜ್ಯದಲ್ಲಿ ಆಗಾಗ ವಿದ್ಯುತ್ ಕಡಿತಗಳು ವಿವಿಧ ವಲಯಗಳನ್ನು ಬಾಧಿಸಿದೆ,” ಎಂದು ಆರೋಪಿಸಿದ್ದಾರೆ.
ವೀಡಿಯೋದಲ್ಲಿ ಆಸ್ಪತ್ರೆಯ ಪುರುಷ ಹಾಗೂ ಮಹಿಳಾ ಸಿಬ್ಬಂದಿಯೊಬ್ಬರು ಮೊಬೈಲ್ ಫ್ಲ್ಯಾಶ್‌ಲೈಟ್ ಆನ್ ಮಾಡಿರುವುದು ಹಾಗೂ ಇನ್ನೊಬ್ಬ ಸಿಬ್ಬಂದಿ ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿರುವ ರೋಗಿಯ ಆರೈಕೆ ಮಾಡುತ್ತಿರುವುದು ಕಾಣಿಸುತ್ತದೆ.
ಆಸ್ಪತ್ರೆ ಸೇವೆಗಳ ಜಿಲ್ಲಾ ಸಮನ್ವಯಕಿ ಡಾ ವಾಗ್ದೇವಿ ಪ್ರತಿಕ್ರಿಯಿಸಿ ಈ ನಿರ್ದಿಷ್ಟ ಆಸ್ಪತ್ರೆಯಲ್ಲಿ ಇನ್ವರ್ಟರ್ ಹಾಗೂ ಜನರೇಟರ್ ಎರಡೂ ಇವೆ. ಆದರೆ ವೋಲ್ಟೇಜ್ ಸಮಸ್ಯೆಯಿಂದಾಗಿ ವಿದ್ಯುತ್ ಕಡಿತವಾದ ಕೂಡಲೇ ಅದು ಕಾರ್ಯಾಚರಿಸಿಲ್ಲ.
ಇದೀಗ ವೈರಲ್ ಆಗಿರುವ ವೀಡಿಯೋವನ್ನು ಚಿತ್ರೀಕರಿಸಿದ ತಕ್ಷಣ ಜನರೇಟರ್ ಕಾರ್ಯಾರಂಭಿಸಿತ್ತು ಹಾಗೂ ದೀಪಗಳು ಬೆಳಗಿದವು ಎಂದು ಅವರು ಹೇಳಿದ್ದಾರೆ.
ಹಗಲು ರಾತ್ರಿ ಭಾರೀ ಮಳೆ ಸುರಿದಿದ್ದರಿಂದ ವೋಲ್ಟೇಜ್ ವ್ಯತ್ಯಯವುಂಟಾಗಿ ಇನ್ವರ್ಟರ್ ಸಮಸ್ಯೆಯಾಗಿತ್ತು. ಆದರೆ ಕೆಲವೇ ನಿಮಿಷಗಳಲ್ಲಿ ಜನರೇಟರ್ ಕಾರ್ಯಾರಂಭಿಸಿತ್ತು ಎಂದು ಅವರು ತಿಳಿಸಿದ್ದಾರೆ.
ತಮ್ಮ ವ್ಯಾಪ್ತಿಯ ಎಲ್ಲಾ ಏಳು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇನ್ವರ್ಟರ್‌ಗಳು ಮತ್ತು ಜನರೇಟರ್‌ಗಳಿವೆ, ಆದರೆ ಈ ನಿರ್ದಿಷ್ಟ ಕೇಂದ್ರದಲ್ಲಿ ಕೆಲ ನಿಮಿಷಗಳ ಕಾಲ ಸಮಸ್ಯೆ ಎದುರಾಯಿತು,” ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷದ ಎಪ್ರಿಲ್ ತಿಂಗಳಿನಲ್ಲಿ ನಡೆದ ಇಂತಹುದೇ ಘಟನೆಯಲ್ಲಿ ನರಸಿಪಟ್ನಂನ ಅನಕಪಲ್ಲಿ ಜಿಲ್ಲೆಯ ಸರಕಾರಿ ಆಸ್ಪತ್ರೆಯೊಂದರಲ್ಲಿ ದೀರ್ಘ ಕಾಲ ಪವರ್ ಕಟ್‌ನಿಂದಾಗಿ ವೈದ್ಯರು ಹೆರಿಗೆಯನ್ನು ಮೊಬೈಲ್ ಫ್ಲ್ಯಾಶ್‌ಲೈಟ್ ಮತ್ತು ಕ್ಯಾಂಡಲ್ ಬೆಳಕಿನಲ್ಲಿ ನಡೆಸಿದ್ದರು.