ಜ್ಞಾನವಾಪಿ ತೀರ್ಪಿನ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ: ಮುಸ್ಲಿಂ ಮುಖಂಡರ ಸ್ಪಷ್ಟನೆ

Update: 2024-02-01 03:34 GMT

Photo: PTI

ವಾರಾಣಾಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದ ಆವರಣದಲ್ಲಿರುವ ‘ವ್ಯಾಸ್ ಕಾ ತೆಖಾನಾ’ದ ಒಳಗೆ ಹಿಂದೂ ಭಕ್ತರು ಪೂಜೆ ಸಲ್ಲಿಸಲು ಅವಕಾಶ ನೀಡಿ ವಾರಾಣಾಸಿ ಕೋರ್ಟ್ ಬುಧವಾರ ನೀಡಿದ ತೀರ್ಪಿನ ವಿರುದ್ಧ ಅಲಹಾಬಾದ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಮುಸ್ಲಿಂ ಪರ ವಕೀಲ ಅಖ್ಲಾಕ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.

"ಈ ತೀರ್ಪಿನ ವಿರುದ್ಧ ಅಲಹಾಬಾದ್ ಹೈಕೋರ್ಟ್ ನ ಮೆಟ್ಟಿಲೇರಲಿದ್ದೇವೆ. ಈ ತೀರ್ಪು 2022ರ ಅಡ್ವೊಕೇಟ್ ಕಮಿಷನರ್ ವರದಿ, ಎಎಸ್ಐ ವರದಿ ಮತ್ತು ನಮ್ಮ ಪರವಾಗಿ 1937ರಲ್ಲಿ ನೀಡಲಾಗಿದ್ದ ತೀರ್ಪನ್ನು ಕಡೆಗಣಿಸಿದೆ. 1993ಕ್ಕೆ ಮುನ್ನ ಇಲ್ಲಿ ಪ್ರಾರ್ಥನೆ ನಡೆಯುತ್ತಿತ್ತು ಎನ್ನುವುದನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳನ್ನು ಹಿಂದೂ ಅರ್ಜಿದಾರರು ನೀಡಿಲ್ಲ. ಆ ಸ್ಥಳದಲ್ಲಿ ಅಂಥ ಯಾವುದೇ ವಿಗ್ರಹ ಇಲ್ಲ" ಎಂದು ಅವರು ಹೇಳಿದ್ದಾರೆ.

ಈ ತೀರ್ಪಿನ ವಿರುದ್ಧ ಉನ್ನತ ಕೋರ್ಟ್ ಗಳಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ವಕೀಲ ಮಿಅರಾಜುದ್ದೀನ್ ಸಿದ್ದೀಖಿ ಪ್ರಕಟಿಸಿದ್ದಾರೆ.

"ಇಂಥ ಯಾವುದೇ ತೀರ್ಪನ್ನು ನಾವು ಒಪ್ಪುವುದಿಲ್ಲ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ಅಧ್ಯಕ್ಷರು ಕೈಜೋಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ನಾವು ಕಾನೂನಾತ್ಮಕವಾಗಿ ಹೋರಾಡುತ್ತೇವೆ. ರಾಜಕೀಯ ಲಾಭ ಪಡೆಯಲು ಇದು ನಡೆಯುತ್ತಿದೆ. ಬಾಬರಿ ಮಸೀದಿ ಪ್ರಕರಣದಲ್ಲಿ ಕೂಡಾ ಇಂಥದ್ದೇ ದೃಷ್ಟಿಕೋನ ಹೊಂದಲಾಗಿತ್ತು. ಒಳಗೆ ಏನೂ ಇರಲಿಲ್ಲ ಎನ್ನುವುದನ್ನು ಆಯುಕ್ತರ ವರದಿ ಮತ್ತು ಎಎಸ್ಐ ವರದಿ ಹೇಳಿತ್ತು. ಈ ತೀರ್ಪಿನ ಬಗ್ಗೆ ನಮಗೆ ತೀವ್ರ ಅಸಮಾಧಾನವಾಗಿದೆ" ಎಂದು ಮಿಅರಾಜುದ್ದೀನ್ ಸಿದ್ದೀಖಿ ವಿವರಿಸಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News