ಸಂಜಯ್ ಸಿಂಗ್ ಬಂಧನ ಬಿಜೆಪಿ ಕೇಂದ್ರ ಕಚೇರಿ ಹೊರಗೆ ಆಪ್ ಪ್ರತಿಭಟನೆ
ಹೊಸದಿಲ್ಲಿ : ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನ್ನ ಹಿರಿಯ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ಹೊಸದಿಲ್ಲಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಬಿಜೆಪಿಯ ಕೇಂದ್ರ ಕಚೇರಿಯ ಸಮೀಪ ಆಮ್ ಆದ್ಮಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪ್ರದರ್ಶನಾ ಫಲಕಗಳನ್ನು ಪ್ರದರ್ಶಿಸಿದರು ಹಾಗೂ ಘೋಷಣೆಗಳನ್ನು ಕೂಗಿದರು. ತನ್ನ ಹಿರಿಯ ನಾಯಕರನ್ನು ಗುರಿಯಾಗಿರಿಸಿ ಕೇಂದ್ರದಲ್ಲಿರುವ ಆಡಳಿತಾರೂಢ ಬಿಜೆಪಿ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
‘‘ಸಂಜಯ್ ಸಿಂಗ್ ಅವರ ನಿವಾಸದಲ್ಲಿ ಭ್ರಷ್ಟಾಚಾರದಿಂದ ಸಂಪಾದಿಸಿದ ಒಂದೇ ಒಂದು ರೂಪಾಯಿ ಕಂಡು ಬಂದರೂ ಅದರ ಪುರಾವೆಯನ್ನು ದೇಶದ ಮುಂದೆ ಪ್ರದರ್ಶಿಸಲಿ ಎಂದು ನಾನು ಬಿಜೆಪಿಗೆ ಸವಾಲು ಹಾಕಲು ಬಯಸುತ್ತೇನೆ. ಅವರ ತಂದೆಯ ಮನೆ ಹಾಗೂ ಅವರ ಬ್ಯಾಂಕ್ ಲಾಕರ್ ಗೆ ದಾಳಿ ಮಾಡಲು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ನಾನು ಆಹ್ವಾನಿಸುತ್ತೇನೆ. ಒಂದು ಪೈಸೆಯಷ್ಟು ಭ್ರಷ್ಟಾಚಾರ ಪತ್ತೆಯಾಗಲಾರದು ಎಂದು ನಾನು ಸವಾಲು ಹಾಕುತ್ತೇನೆ’’ ಎಂದು ದಿಲ್ಲಿ ಸಚಿವೆ ಹಾಗೂ ಆಪ್ ನಾಯಕಿ ಆತಿಶಿ ಹೇಳಿದರು.
ಸಿಂಗ್ ಬಂಧನದ ವಿರುದ್ಧ ಚಂಡಿಗಢದಲ್ಲಿ ಕೂಡ ಆಪ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸುತ್ತಿದ್ದ ಆಪ್ ಕಾರ್ಯಕರ್ತರ ಮೇಲೆ ಚಂಡಿಗಢದ ಪೊಲೀಸರು ಜಲ ಪಿರಂಗಿಗಳನ್ನು ಪ್ರಯೋಗಿಸಿದರು. ಹೊಸದಿಲ್ಲಿಯಲ್ಲಿರುವ ಸಿಂಗ್ ಅವರ ನಿವಾಸದಲ್ಲಿ ಒಂದು ದಿನ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಅಕ್ಟೋಬರ್ 4ರಂದು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಬಂಧಿಸುತ್ತಿರುವ ಆಪ್ ನ ಮೂರನೇ ನಾಯಕ ಸಿಂಗ್.
ಈ ಹಿಂದೆ ಪಕ್ಷದ ಸಂವಹನ ಉಸ್ತುವಾರಿ ವಿಜಯ್ ನಾಯರ್ ನನ್ನು ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಬಂಧಿಸಿತ್ತು. ಅನಂತರ ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿಯಲ್ಲಿ ಬಂಧಿಸಿತ್ತು. ಇಬ್ಬರೂ ಈಗ ಜೈಲಿನಲ್ಲಿದ್ದಾರೆ.