ಕೆಂಪು ಡೈರಿ ಕುರಿತ ಪ್ರಧಾನಿ ಮೋದಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅಶೋಕ್ ಗೆಹ್ಲೋಟ್
ಕೆಂಪು ಡೈರಿ ಒಂದು ಕಾಲ್ಪನಿಕ, ಕೆಂಪು ಡೈರಿ ಇಲ್ಲವೇ ಇಲ್ಲ, ಅವರು ಕೆಂಪು ಡೈರಿಯನ್ನು ನೋಡಬಹುದು, ಆದರೆ ಕೆಂಪು ಸಿಲಿಂಡರ್ ಹಾಗೂ ಕೆಂಪು ಟೊಮೆಟೊಗಳನ್ನು ನೋಡುವುದಿಲ್ಲ.. ಬೆಲೆ ಏರಿಕೆಯಿಂದ ಕೆಂಪು ಬಣ್ಣಕ್ಕೆ ತಿರುಗಿದ ಜನರ ಮುಖವನ್ನು ಅವರು ನೋಡುವುದಿಲ್ಲ, ಚುನಾವಣೆಯಲ್ಲಿ ಜನರು ಅವರಿಗೆ ಕೆಂಪು ಬಾವುಟ ತೋರಿಸುತ್ತಾರೆ: ಅಶೋಕ್ ಗೆಹ್ಲೋಟ್
ಜೈಪುರ: ರಾಜಸ್ಥಾನದ ರಾಜಕೀಯ ಪಡಸಾಲೆಯಲ್ಲಿ "ಕೆಂಪು ಡೈರಿ" ಕುರಿತ ರಹಸ್ಯ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅನ್ನು ಕೆಂಪು ಡೈರಿ ಹಾಳುಗೆಡಹಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
ರಾಜ್ಯ ಸರಕಾರದ ಕಾರ್ಯಕ್ರಮವೊಂದರಲ್ಲಿ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, , "ಕೆಂಪು ಡೈರಿ ಒಂದು ಕಾಲ್ಪನಿಕ, ಕೆಂಪು ಡೈರಿ ಇಲ್ಲವೇ ಇಲ್ಲ, ಅವರು ಕೆಂಪು ಡೈರಿಯನ್ನು ನೋಡಬಹುದು, ಆದರೆ ಕೆಂಪು ಸಿಲಿಂಡರ್ ಹಾಗೂ ಕೆಂಪು ಟೊಮೆಟೊಗಳನ್ನು ನೋಡುವುದಿಲ್ಲ.. ಬೆಲೆ ಏರಿಕೆಯಿಂದ ಕೆಂಪು ಬಣ್ಣಕ್ಕೆ ತಿರುಗಿದ ಜನರ ಮುಖವನ್ನು ಅವರು ನೋಡುವುದಿಲ್ಲ, ಚುನಾವಣೆಯಲ್ಲಿ ಜನರು ಅವರಿಗೆ ಕೆಂಪು ಬಾವುಟ ತೋರಿಸುತ್ತಾರೆ’’ ಎಂದರು.
ರಾಜಸ್ಥಾನದ ಸಿಕಾರ್ ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ "ಮೊಹಬ್ಬತ್ ಕಿ ದುಕಾನ್" ಘೋಷಣೆಯನ್ನು ಲೇವಡಿ ಮಾಡಿದರು ಹಾಗೂ "ಲೂಟ್ ಕಿ ದುಕಾನ್, ಝೂಟ್ ಕಿ ದುಕಾನ್" (ಲೂಟಿ ಮತ್ತು ಸುಳ್ಳಿನ ಅಂಗಡಿ) ನ ಇತ್ತೀಚಿನ ಉತ್ಪನ್ನ ಕೆಂಪು ಡೈರಿ, ಈ ಡೈರಿಯಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ರಹಸ್ಯಗಳಿವೆ ಎಂದು ಹೇಳಲಾಗುತ್ತಿದೆ. ಈ ಕೆಂಪು ಡೈರಿಯು ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲುಣಿಸಲಿದೆ ಎಂದರು..
ಕಳೆದ ವಾರ ಅಸೆಂಬ್ಲಿಯಲ್ಲಿ ನಡೆದ ನಾಟಕೀಯ ಘಟನೆಗಳ ನಂತರ ಕೆಂಪು ಡೈರಿ ರಾಜಸ್ಥಾನದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ. ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ರಾಜ್ಯ ಸರಕಾರದ "ವೈಫಲ್ಯ" ದ ಕುರಿತು ಹೇಳಿಕೆ ನೀಡಿದ ನಂತರ ಇತ್ತೀಚೆಗೆ ವಜಾಗೊಂಡ ಕಾಂಗ್ರೆಸ್ ಶಾಸಕ ರಾಜೇಂದ್ರ ಸಿಂಗ್ ಗುಧಾ, ಅವರು ಗೆಹ್ಲೋಟ್ ಅವರ ರಹಸ್ಯ ವಿಚಾರವನ್ನು ಹೊಂದಿದೆ ಎಂದು ಹೇಳುವ ಕೆಂಪು ಡೈರಿಯೊಂದಿಗೆ ವಿಧಾನಸಭೆಗೆ ತೆರಳಿದ್ದರು. ಅವರನ್ನು ಸದನದಿಂದ ಹೊರ ಹಾಕಲಾಯಿತು.
ರಾಜಕೀಯ ಅವಕಾಶವನ್ನು ಗ್ರಹಿಸಿದ ಬಿಜೆಪಿ, ಕೆಂಪು ಡೈರಿಯಲ್ಲಿ ರಹಸ್ಯಗಳಿವೆ, ಅದು ಅನೇಕ ನಾಯಕರ ರಾಜಕೀಯ ಅಸ್ತಿತ್ವವನ್ನು ಅಳಿಸಿಹಾಕುವ ರಹಸ್ಯಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ.