ಅಮೃತಪಾಲ್ ಸಿಂಗ್ ಸೆಲ್ ನಿಂದ ವಿದ್ಯುನ್ಮಾನ ಸಾಧನಗಳ ವಶ ಪ್ರಕರಣ | ಅಸ್ಸಾಂ ಜೈಲು ಅಧಿಕಾರಿ ಬಂಧನ

Update: 2024-03-08 16:33 GMT

Photo: NDTV 

ಗುವಾಹಟಿ: ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ)ಯಡಿ ಬಂಧಿತನಾಗಿರುವ ವಾರಿಸ್ ದೆ ಪಂಜಾಬ್ ಮುಖ್ಯಸ್ಥ ಅಮೃತಪಾಲ್ ಸಿಂಗ್ ನ ಕೊಠಡಿಯಿಂದ ವಿದ್ಯುನ್ಮಾನ ಸಾಧನಗಳನ್ನು ವಶಪಡಿಸಿಕೊಂಡಿದ್ದ ಇತ್ತೀಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಮಿನ ಅತ್ಯಂತ ಬಿಗುಭದ್ರತೆಯ ದಿಬ್ರುಗಡ ಸೆಂಟ್ರಲ್ ಜೈಲಿನ ಅಧೀಕ್ಷಕರನ್ನು ಬಂಧಿಸಲಾಗಿದೆ.

‘ಡಿಜಿಟಲ್ ಸಾಕ್ಷ್ಯ’ದ ಆಧಾರದಲ್ಲಿ ಜೈಲು ಅಧೀಕ್ಷಕ ನಿಪೇನ್ ದಾಸ್ ರನ್ನು ಬಂಧಿಸಲಾಗಿದೆ ಎಂದು  ತಿಳಿಸಿದರು.

ಫೆ.17ರಂದು ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಸಿಂಗ್ ಮತ್ತು ಆತನ ಒಂಭತ್ತು ಸಹಚರರನ್ನು ಇರಿಸಲಾಗಿದ್ದ ಎನ್ಎಸ್ಎ ಸೆಲ್ ನಿಂದ ಸಿಮ್ ಸಹಿತ ಸ್ಮಾರ್ಟ್ಫೋನ್,ಕೀಪ್ಯಾಡ್ ಫೋನ್,ಕೀಬೋರ್ಡ್ ಸಹಿತ ಟಿವಿ ರಿಮೋಟ್,ಸ್ಪೈ ಕ್ಯಾಮ್ ಪೆನ್,ಪೆನ್ಡ್ರೈವ್ ಗಳು,ಬ್ಲ್ಯೂಟೂಥ್ ಹೆಡ್ಫೋನ್ ಮತ್ತು ಸ್ಪೀಕರ್ ಗಳು ಹಾಗೂ ಸ್ಮಾರ್ಟ್ವಾಚ್ ನನ್ನು ವಶಪಡಿಸಿಕೊಂಡಿದ್ದರು.

ಜೈಲು ಅಧೀಕ್ಷಕರು ಮತ್ತು ಕೆಲವು ಸಿಬ್ಬಂದಿಗಳು ಎನ್ಎಸ್ಎ ಬಂಧಿತರೊಂದಿಗೆ ಶಾಮೀಲಾಗಿದ್ದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಡಿಜಿಟಲ್ ಸಾಕ್ಷ್ಯದ ಆಧಾರದಲ್ಲಿ ದಾಸ್ರನ್ನು ಬಂಧಿಸಲಾಗಿದೆ ಎಂದು ದಿಬ್ರುಗಡ ಎಸ್ಪಿ ವಿ.ವಿ.ರಾಕೇಶ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಕರಣವು ಎನ್ಎಸ್ಎ ಬಂಧಿತರನ್ನು ಒಳಗೊಂಡಿದೆ,ಸಾಮಾನ್ಯ ಕೈದಿಗಳನ್ನಲ್ಲ. ಹೀಗಾಗಿ ಇದು ಸೂಕ್ಷ್ಮ ಪ್ರಕರಣವಾಗಿದು, ಇನ್ನಷ್ಟು ತನಿಖೆಯನ್ನು ನಡೆಸಲಾಗುವುದು. ದಾಸ್ ಜೈಲು ಕೈಪಿಡಿಯ ನಿಯಮಗಳಿಗೆ ಅನುಗುಣವಾಗಿ ಸಿಂಗ್ ಮತ್ತು ಸಹಚರರಿಗೆ ವಸ್ತುಗಳನ್ನು ಒದಗಿಸಬೇಕಿತ್ತು,ಆದರೆ ಅವರು ಅದನ್ನು ಉಲ್ಲಂಘಿಸಿದ್ದಾರೆ ಎಂದರು.

ಕಳೆದ ಕೆಲವು ದಿನಗಳಿಂದ ಉಪವಾಸ ಮುಷ್ಕರ ನಡೆಸುತ್ತಿರುವ ಎನ್ಎಸ್ಎ ಬಂಧಿತರ ಆರೋಗ್ಯ ಕುರಿತ ಪ್ರಶ್ನೆಗೆ ರೆಡ್ಡಿ,ಅವರ ಆರೋಗ್ಯವನ್ನು ಪ್ರತಿ ದಿನ ಪರೀಕ್ಷಿಸಲಾಗುತ್ತಿದೆ. ಮೂವರಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಈಗ ಚೇತರಿಸಿಕೊಂಡಿದ್ದಾರೆ ಎಂದು ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News