ಪಂಚ ರಾಜ್ಯ ಚುನಾವಣೆಗೆ ಸ್ಪರ್ಧೆ: ಕಾಂಗ್ರೆಸ್, ಬಿಜೆಪಿಯಲ್ಲಿ ಮಹಿಳಾ ಪ್ರಾತಿನಿಧ್ಯ ಶೇಕಡ 12!
ಹೊಸದಿಲ್ಲಿ: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33.3ಷ್ಟು ಮೀಸಲಾಗಿ ಕಲ್ಪಿಸುವ ಮಸೂದೆ ಸಂಸತ್ತಿನಲ್ಲಿ ಇತ್ತೀಚೆಗೆ ಆಂಗೀಕಾರವಾಗಿದ್ದರೂ, ಪಂಚ ರಾಜ್ಯಗಳ ಚುನಾವಣೆಗೆ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‍ನಿಂದ ಕಣಕ್ಕಿಳಿಸಿದ ಅಭ್ಯರ್ಥಿಗಳಲ್ಲಿ ಮಹಿಳೆಯರಿಗೆ ಸಿಕ್ಕಿದ ಪಾಲು ಕೇವಲ ಶೇಕಡ 12ರಷ್ಟು ಮಾತ್ರ. ಮುಂದಿನ ಜನಗಣತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಮಹಿಳಾ ಮೀಸಲಾತಿ ವಾಸ್ತವವಾಗಿ ಅಸ್ತಿತ್ವಕ್ಕೆ ಬರಲಿದೆ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಚುನಾವಣೆ ನಡೆಯುವ 679 ಕ್ಷೇತ್ರಗಳ ಪೈಕಿ ಬಿಜೆಪಿ 643 ಮತ್ತು ಕಾಂಗ್ರೆಸ್ 666 ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ಬಿಜೆಪಿ ವತಿಯಿಂದ 80 ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದರೆ, ಕಾಂಗ್ರೆಸ್ 74 ಮಹಿಳೆಯರನ್ನು ಕಣಕ್ಕೆ ಇಳಿಸಿದೆ.
ನವೆಂಬರ್ 17ರಂದು ಮಧ್ಯಪ್ರದೇಶದ 230 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ 28 ಹಾಗೂ ಕಾಂಗ್ರೆಸ್ 30 ಮಂದಿ ಮಹಿಳೆಯರನ್ನು ಕಣಕ್ಕೆ ಇಳಿಸಿದೆ. 2018ರಲ್ಲಿ ಈ ಸಂಖ್ಯೆ ಅನುಕ್ರಮವಾಗಿ 24 ಹಾಗೂ 27 ಆಗಿತ್ತು. ಅಂತೆಯೇ ಈ ತಿಂಗಳ 25ರಂದು ಚುನಾವಣೆ ನಡೆಯುವ 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆ ಪ್ರವೇಶಿಸಲು ಬಿಜೆಪಿಯ 20 ಹಾಗೂ ಕಾಂಗ್ರೆಸ್‍ನ 28 ಮಹಿಳೆಯರು ಕಣದಲ್ಲಿದ್ದಾರೆ. 2018ರ ಚುನಾವಣೆಯಲ್ಲಿ ಈ ಪ್ರಮಾಣ ಅನುಕ್ರಮವಾಗಿ 23 ಮತ್ತು 27 ಆಗಿತ್ತು.
ಈ ತಿಂಗಳ 7 ಮತ್ತು 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯುವ ಛತ್ತೀಸ್‍ಗಢ ವಿಧಾನಸಭೆಯ 90 ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ 14 ಹಾಗೂ ಕಾಂಗ್ರೆಸ್ ಮೂವರು ಮಹಿಳೆಯರನ್ನು ಕಣಕ್ಕೆ ಇಳಿಸಿದೆ. 30ರಂದು ಚುನಾವಣೆ ನಡೆಯುವ ತೆಲಂಗಾಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕ್ರಮವಾಗಿ 11 ಹಾಗೂ 14 ಮಂದಿ ಮಹಿಳೆಯರನ್ನು ಕಣಕ್ಕೆ ಇಳಿಸಿವೆ. ಮಿಜೋರಾಂನಲ್ಲಿ ಬಿಜೆಪಿಯ ನಾಲ್ವರು ಹಾಗೂ ಕಾಂಗ್ರೆಸ್‍ನ ಇಬ್ಬರು ಮಹಿಳೆಯರು ಕಣದಲ್ಲಿದ್ದಾರೆ.