ದಿಲ್ಲಿ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣವಚನ ಸ್ವೀಕಾರ

Update: 2024-09-21 16:22 GMT

ಅತಿಶಿ ಸಿಂಗ್ | PTI 

ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿಯಾಗಿ ಆತಿಶಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಈ ಉನ್ನತ ಪದವಿಯನ್ನು ವಹಿಸಿದ ಅತ್ಯಂತ ಕಿರಿಯ ವ್ಯಕ್ತಿಯಾಗಿ ಅವರು ದಾಖಲೆಗೆ ಸೇರ್ಪಡೆಗೊಂಡರು.

ಅವರು ದಿಲ್ಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ. ಇದಕ್ಕೂ ಮೊದಲು ಸುಶ್ಮಾ ಸ್ವರಾಜ್ ಮತ್ತು ಶೀಲಾ ದೀಕ್ಷಿತ್ ದಿಲ್ಲಿಯ ಮಹಿಳಾ ಮುಖ್ಯಮಂತ್ರಿಯಾಗಿದ್ದರು.

ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ ಬಳಿಕ, ತೆರವಾಗಿರುವ ಸ್ಥಾನವನ್ನು ಆತಿಶಿ ತುಂಬಿದ್ದಾರೆ.

ರಾಜನಿವಾಸದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ, ಐವರು ಶಾಸಕರೂ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರೆಂದರೆ- ಸೌರಭ್ ಭಾರದ್ವಾಜ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಮತ್ತು ಮುಕೇಶ್ ಅಹ್ಲಾವತ್.

ಇದು ದಿಲ್ಲಿಯಲ್ಲಿ ಸತತ ನಾಲ್ಕನೇ ಆಪ್ ಸರಕಾರವಾಗಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಆತಿಶಿಯ ಹೆತ್ತವರಾದ ತೃಪ್ತಾ ವಾಹಿ ಮತ್ತು ವಿಜಯ್ ಸಿಂಗ್ ಉಪಸ್ಥಿತರಿದ್ದರು.

42 ವರ್ಷ ವಯಸ್ಸಿನ ಆತಿಶಿ ಭಾರತದಲ್ಲಿ 17ನೇ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಅವರ ಅಧಿಕಾರಾವಧಿ ಚಿಕ್ಕದಾಗಿರುತ್ತದೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ದಿಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

‘‘ನಿರ್ಗಮನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನನ್ನ ಮೇಲೆ ಇಟ್ಟಿರುವ ವಿಶ್ವಾಸದಿಂದ ನನಗೆ ಸಂತೋಷವಾಗಿದೆ. ಆದರೆ, ಅವರು ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ನನಗೆ ದುಃಖವೂ ಆಗಿದೆ’’ ಎಂದು ಪ್ರಮಾಣವಚನ ಸ್ವೀಕಾರದ ಬಳಿಕ ಆತಿಶಿ ಹೇಳಿದರು.

‘‘ಮೊದಲಿಗೆ, ದಿಲ್ಲಿಯ ಜನಪ್ರಿಯ ಮುಖ್ಯಮಂತ್ರಿ, ಆಪ್ ರಾಷ್ಟ್ರೀಯ ಸಂಚಾಲಕ ಮತ್ತು ನನ್ನ ಗುರು ಅರವಿಂದ ಕೇಜ್ರಿವಾಲ್‌ರಿಗೆ ಕೃತಜ್ಞತೆ ಸಲ್ಲಿಸಲು ನಾನು ಬಯಸುತ್ತೇನೆ. ಮೊದಲ ಬಾರಿಯ ಶಾಸಕರೊಬ್ಬರು ರಾಜ್ಯವೊಂದರ ಮುಖ್ಯಮಂತ್ರಿ ಆಗಲು ಆಪ್‌ನಲ್ಲಿ, ಅವರ ನಾಯಕತ್ವದಲ್ಲಿ ಮಾತ್ರ ಸಾಧ್ಯ’’ ಎಂದು ಆತಿಶಿ ನುಡಿದರು.

ಬಿಜೆಪಿ ಸಂಸದ ಮನೋಜ್ ತಿವಾರಿ ನೂತನ ಮುಖ್ಯಮಂತ್ರಿ ಆತಿಶಿ ಅವರನ್ನು ಅಭಿನಂದಿಸಿದ್ದಾರೆ.

ಕೇಜ್ರಿವಾಲ್‌ರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆರಿಸಿ : ದಿಲ್ಲಿ ಜನತೆಗೆ ಆತಿಶಿ ಒತ್ತಾಯ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆರಿಸುವಂತೆ ದಿಲ್ಲಿಯ ನೂತನ ಮುಖ್ಯಮಂತ್ರಿ ಆತಿಶಿ ಶನಿವಾರ ದಿಲ್ಲಿ ಜನತೆಯನ್ನು ಒತ್ತಾಯಿಸಿದ್ದಾರೆ. ಅವರು ಮುಖ್ಯಮಂತ್ರಿಯಾಗದಿದ್ದರೆ, ನಮ್ಮ ಸರಕಾರವು ನೀಡುತ್ತಿರುವ ಎಲ್ಲಾ ಸವಲತ್ತುಗಳನ್ನು ‘‘ಕಸಿದುಕೊಳ್ಳಲು ಬಿಜೆಪಿಯು ಸಂಚು ರೂಪಿಸುತ್ತಿದೆ’’ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆತಿಶಿ, ‘‘ಈ ದೇಶದ ರಾಜಕೀಯದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆಗೆ ಉದಾಹರಣೆಯಾಗಿ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನ್ಯಾಯಾಲಯದ ನಿರ್ಧಾರವೊಂದೇ ತನಗೆ ಸಾಕಾಗುವುದಿಲ್ಲ ಎಂದು ಅವರು ಹೇಳಿದರು. ನಾನು ಜನರ ನ್ಯಾಯಾಲಯಕ್ಕೆ ಹೋಗುತ್ತೇನೆ ಮತ್ತು ನಾನು ಪ್ರಾಮಾಣಿಕ ಎಂಬುದಾಗಿ ದಿಲ್ಲಿಯ ಜನತೆ ಹೇಳುವವರೆಗೆ ಮುಖ್ಯಮಂತ್ರಿಯ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಅವರು ಹೇಳಿದರು’’ ಎಂದು ತಿಳಿಸಿದರು.

‘‘ಈ ಜಗತ್ತಿನಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆಗೆ ಮೇಲ್ಪಂಕ್ತಿ ಹಾಕಿಕೊಟ್ಟವರಲ್ಲಿ ಕೇಜ್ರಿವಾಲ್ ಮೊದಲಿಗರಾಗಿದ್ದಾರೆ’’ ಎಂಬುದಾಗಿಯೂ ಅವರು ಹೇಳಿದರು.

‘‘ಇನ್ನು ನಾವೆಲ್ಲಾ ದಿಲ್ಲಿ ಜನರು ಮಾಡಬೇಕಾದ ಕೆಲಸವೆಂದರೆ, ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ರನ್ನು ಮತ್ತೊಮ್ಮೆ ದಿಲ್ಲಿಯ ಮುಖ್ಯಮಂತ್ರಿಯಾಗಿ ಮಾಡುವುದು. ದಿಲ್ಲಿಯ ಜನರು ಅವರನ್ನು ದಿಲ್ಲಿಯ ಮುಖ್ಯಮಂತ್ರಿಯಾಗಿ ಮಾಡದಿದ್ದರೆ, ಬಿಜೆಪಿಯು ಪಿತೂರಿ ರೂಪಿಸಿ, ಇಗ ದಿಲ್ಲಿಯ ಜನರು ಪಡೆಯುತ್ತಿರುವ ಉಚಿತ ವಿದ್ಯುತ್ತನ್ನು ನಿಲ್ಲಿಸುತ್ತದೆ. ಅರವಿಂದ ಕೇಜ್ರಿವಾಲ್ ಅಭಿವೃದ್ಧಿಪಡಿಸಿರುವ ಸರಕಾರಿ ಶಾಲೆಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ಮರಳಿಸಲಾಗುತ್ತದೆ, ಮೊಹಲ್ಲಾ ಕ್ಲಿನಿಕ್‌ಗಳನ್ನು ಮುಚ್ಚಲಾಗುತ್ತದೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದನ್ನು ನಿಲ್ಲಿಸಲಾಗುತ್ತದೆ. ಮಹಿಳೆಯರ ಉಚಿತ ಬಸ್ ಪ್ರಯಾಣವನ್ನು ರದ್ದುಪಡಿಸಲಾಗುತ್ತದೆ’’ ಎಂದು ಆತಿಶಿ ನುಡಿದರು.

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News