ಪಿಐಎಲ್ ತೀರ್ಪು ಬಳಸಿ ಉತ್ತರಾಖಂಡದಲ್ಲಿ 4,000 ಕುಟುಂಬಗಳ ತೆರವಿಗೆ ಯತ್ನ: ರೈಲ್ವೆಗೆ ಸುಪ್ರೀಂ ಕೋರ್ಟ್ ತರಾಟೆ

Update: 2024-07-25 12:19 GMT

ಸುಪ್ರೀಂ ಕೋರ್ಟ್ | PTI  

ಹೊಸದಿಲ್ಲಿ : ಸೂಕ್ತ ಕಾನೂನು ವಿಧಾನವನ್ನು ಅನುಸರಿಸುವ ಬದಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್)ಯೊಂದರಲ್ಲಿ ನೀಡಿದ್ದ ತೀರ್ಪನ್ನು ಬಳಸಿಕೊಂಡು ಉತ್ತರಾಖಂಡದ ಹಲ್ದ್ವಾನಿಯಲ್ಲಿ ಸುಮಾರು 4,000 ಕುಟುಂಬಗಳನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಬುಧವಾರ ಭಾರತೀಯ ರೈಲ್ವೆಯನ್ನು ತೀವ್ರ ತರಾಟೆಗೆತ್ತಿಕೊಂಡಿದೆ. ಇವುಗಳಲ್ಲಿ ಮುಸ್ಲಿಮ್ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಡಿಸಬರ್ 2022ರಲ್ಲಿ ಉಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ನೀಡಿದ್ದ ತೀರ್ಪಿನ ಆಧಾರದಲ್ಲಿ ರೈಲ್ವೆಯು ಹಲ್ದ್ವಾನಿಯ ಬನಭೂಲಪುರ ಪ್ರದೇಶದಲ್ಲಿಯ ತನ್ನದೆಂದು ಹೇಳಿಕೊಂಡಿರುವ ಭೂಮಿಯಿಂದ ಈ ಕುಟುಂಬಗಳನ್ನು ತೆರವುಗೊಳಿಸಲು ಮುಂದಾಗಿತ್ತು. ಆದರೆ ಈ ಭೂಮಿಯು ರೈಲ್ವೆಗೆ ಸೇರಿದ್ದಲ್ಲ ಎಂದು ಅಲ್ಲಿಯ ನಿವಾಸಿಗಳು ಪ್ರತಿಪಾದಿಸಿದ್ದಾರೆ.

ಭಾರತೀಯ ರೈಲ್ವೆಯು ಡಿಸೆಂಬರ್ 2022ರ ತೀರ್ಪಿನ ಆಧಾರದಲ್ಲಿ 4,000 ಕುಟುಂಬಗಳನ್ನು ತೆರವುಗೊಳಿಸಲು ಕ್ರಮ ಆರಂಭಿಸುವ ಬದಲು ಸಾರ್ವಜನಿಕ ಪ್ರದೇಶಗಳ (ಅನಧಿಕೃತ ನಿವಾಸಿಗಳ ತೆರವು) ಕಾಯ್ದೆಯಂತೆ ಅವುಗಳಿಗೆ ಮುಂಚಿತವಾಗಿ ನೋಟಿಸ್‌ಗಳನ್ನು ಕಳುಹಿಸಬೇಕು ಎಂದು ಪೀಠವು ಸೂಚಿಸಿತು.

ರೈಲ್ವೆಯು ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಬೆಟ್ಟು ಮಾಡಿದ ನ್ಯಾಯಾಲಯವು, ‘ನೀವು ಜನರನ್ನು ತೆರವುಗೊಳಿಸಲು ಬಯಸಿದ್ದರೆ ಅವರಿಗೆ ನೋಟಿಸ್ ನೀಡಿ. ಪಿಐಎಲ್ ತೀರ್ಪಿನ ಮೇಲೇಕೆ ಸವಾರಿ ಮಾಡುತ್ತಿದ್ದೀರಿ? ನೀವು ಅದನ್ನು ಬಳಸುವಂತಿಲ್ಲ. ಅವರೂ ಜನರೇ ಅಲ್ಲವೇ? ಸಾರ್ವಜನಿಕ ಪ್ರದೇಶಗಳ ಕಾಯ್ದೆಯ ಬದಲು ನೀವು ಪಿಐಎಲ್ ತೀರ್ಪು ಬಳಸಿಕೊಳ್ಳಲು ಮುಂದಾಗಿದ್ದೀರಿ. ಇದು ತುಂಬ ತಪ್ಪು’ ಎಂದು ಹೇಳಿತು.

ನಿವಾಸಿಗಳ ಪ್ರತಿಭಟನೆಗಳ ನಡುವೆ 2023, ಜ.5ರಂದು ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು. ರಾಜ್ಯದ ಆಡಳಿತಾರೂಢ ಬಿಜೆಪಿ ಸರಕಾರವು ಪ್ರಕರಣದಲ್ಲಿ ಸರಿಯಾಗಿ ವಾದಿಸಿರಲಿಲ್ಲ ಮತ್ತು ಇದು ಉಚ್ಚ ನ್ಯಾಯಾಲಯವು ತಮಗೆ ಪ್ರತಿಕೂಲ ಆದೇಶವನ್ನು ಹೊರಡಿಸಲು ಕಾರಣವಾಗಿತ್ತು ಎಂದು ಪೀಡಿತ ಕುಟುಂಬಗಳು ವಾದಿಸಿದ್ದವು. ಒಕ್ಕಲೆಬ್ಬಿಸಿದರೆ ಇಲ್ಲಿಯ ಜನರು ನಿರ್ವಸಿತರಾಗುತ್ತಾರೆ ಎಂದೂ ಅವು ಹೇಳಿದ್ದವು.

ಸೀಮಿತ ಅವಧಿಗೆ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ರೈಲ್ವೆ ಬುಧವಾರ ಅರ್ಜಿಯನ್ನು ಸಲ್ಲಿಸಿತ್ತು. ಮಳೆಯಿಂದಾಗಿ ಹಾನಿಗೀಡಾಗಿರುವ ಹಲ್ದ್ವಾನಿಯಲ್ಲಿನ ರೈಲ್ವೆ ಕಟ್ಟಡವೊಂದರ ಮೂಲಸೌಕರ್ಯದ ದುರಸ್ತಿ ಅಗತ್ಯವಿದೆ ಎಂದು ಅದು ತಿಳಿಸಿತ್ತು.

ಕೆಲವು ಕುಟುಂಬಗಳು ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ವಿವಾದಿತ ಭೂಮಿಯಲ್ಲಿ ವಾಸವಾಗಿವೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ಪೀಠವು, ʼಇದೇ ಸಮಯದಲ್ಲಿ ನಾವಿದನ್ನು ಸ್ಥಳೀಯ ಪಟ್ಟಭದ್ರ ಹಿತಾಸಕ್ತಿಗಳಿಂದ ದೂರವಿಡೋಣ. ಈ ಭೂಮಿಯನ್ನು ಕಬಳಿಸಲು ಹೊಂಚು ಹಾಕಿರುವ ಹಲವು ರಣಹದ್ದುಗಳು ಅಲ್ಲಿವೆ’ ಎಂದಿತು.

ಇದನ್ನು ಗಮನದಲ್ಲಿಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯವು ಪೀಡಿತ ಕುಟುಂಬಗಳ ಸಂಖ್ಯೆ ಮತ್ತು ಅವುಗಳ ಪುನರ್ವಸತಿಗೆ ಬೇಕಾದ ಭೂಮಿಯ ಪ್ರಮಾಣವನ್ನು ನಿರ್ಧರಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿತು.

ಭಾರತೀಯ ರೈಲ್ವೆ ಮತ್ತು ಕೇಂದ್ರ ವಸತಿ ಸಚಿವಾಲಯದೊಂದಿಗೆ ಸಮಾಲೋಚಿಸಿ ಪುನರ್ವಸತಿ ಯೋಜನೆಯೊಂದನ್ನು ತ್ವರಿತವಾಗಿ ರೂಪಿಸುವಂತೆ ಉತ್ತರಾಖಂಡ ಮುಖ್ಯ ಕಾರ್ಯದರ್ಶಿಗೆ ಸರ್ವೋಚ್ಚ ನ್ಯಾಯಾಲಯವು ಸೂಚಿಸಿತು.

ಪ್ರಕರಣದ ಮುಂದಿನ ವಿಚಾರಣೆ ಸೆ.11ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News