ಬಾಂಗ್ಲಾ ಚುನಾವಣೆ: ಪ್ರಧಾನಿಯಾಗಿ ಶೇಖ್ ಹಸೀನಾ ಮರು ಆಯ್ಕೆ

Update: 2024-01-09 02:25 GMT

Photo: PTI

ಢಾಕಾ: ಬಾಂಗ್ಲಾದೇಶದಲ್ಲಿ ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಐದನೇ ಅವಧಿಗೆ ಪ್ರಧಾನಿ ಶೇಖ್ ಹಸೀನಾ ಮರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ವಿರೋಧ ಪಕ್ಷಗಳು ಈ ಚುನಾವಣೆಯನ್ನು ಬಹಿಷ್ಕರಿಸಿದ್ದು, ವಿರೋಧ ಪಕ್ಷಗಳನ್ನು ಉಗ್ರಗಾಮಿ ಸಂಘಟನೆ ಎಂದು ಪ್ರಧಾನಿ ಟೀಕಿಸಿದ್ದಾರೆ.

ಆಡಳಿತಾರೂಢ ಅವಾಮಿ ಲೀಗ್ ಶೇಕಡ 50ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ ಎಂದು ಚುನಾವಣಾ ಆಯೋಗದ ವಕ್ತಾರ ಹೇಳಿದ್ದಾರೆ. ಬಡತನದ ಬೇಗುದಿಯಲ್ಲಿ ಸಿಲುಕಿದ್ದ ದೇಶದಲ್ಲಿ ಆರ್ಥಿಕ ಪ್ರಗತಿಯ ಕಾರಣೀಕರ್ತರಾಗಿದ್ದ ಶೇಕ್ ಹಸೀನಾ ಸರ್ಕಾರದ ವಿರುದ್ಧ ಮಾನವ ಹಕ್ಕು ಉಲ್ಲಂಘನೆಯ ಆರೋಪವೂ ಇತ್ತು.

ಬಹುತೇಕ ಕ್ಷೇತ್ರಗಳಲ್ಲಿ ಆಡಳಿತ ಪಕ್ಷಕ್ಕೆ ಸೂಕ್ತ ವಿರೋಧಿಗಳೇ ಇರಲಿಲ್ಲ. ಆದರೆ ಶಾಸನಸಭೆಗೆ ಏಕಪಕ್ಷದ ಸಂಸ್ಥೆ ಎಂಬ ಹಣೆಪಟ್ಟಿ ಬರಬಾರದು ಎಂಬ ಕಾರಣಕ್ಕೆ ಕೆಲ ಕ್ಷೇತ್ರಗಳಲ್ಲಿ ಶೇಕ್ ಹಸೀನಾ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿರಲಿಲ್ಲ. ಪ್ರಮುಖ ವಿರೋಧ ಪಕ್ಷವಾಗಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ಬಹುತೇಕ ಮುಖಂಡರನ್ನು ಬಂಧಿಸಲಾಗಿದ್ದು, ಸಾರ್ವತ್ರಿಕ ಮುಷ್ಕರಕ್ಕೆ ಪಕ್ಷ ಕರೆ ನೀಡಿದೆ. ಹಲವು ಇತರ ವಿರೋಧ ಪಕ್ಷಗಳು ಕೂಡಾ ಚುನಾವಣೆಯನ್ನು ಬಹಿಷ್ಕರಿಸಿದ್ದವು.

ನಾಗರಿಕರು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನಂಬಿಕೆ ಪ್ರದರ್ಶಿಸಬೇಕು ಎಂದು ಹಸೀನಾ (76) ಕರೆ ನೀಡಿದ್ದು, ಶೇಕಡ 40ರಷ್ಟು ಮಾತ್ರ ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

ಶೇಕಡ 90ರಷ್ಟು ಫಲಿತಾಂಶ ಪ್ರಕಟವಾಗಿದ್ದು, ಚುನಾವಣೆಯಲ್ಲಿ ಹಸೀನಾ ಪಕ್ಷ ಮೂರನೇ ಎರಡರಷ್ಟು ಬಹುಮತ ಪಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಒಟ್ಟು 300 ಸ್ಥಾನಗಳ ಪೈಕಿ 264 ಫಲಿತಾಂಶಗಳು ಪ್ರಕಟವಾಗಿದ್ದು, ಅವಾಮಿ ಲೀಗ್ 204 ಸ್ಥಾನಗಳನ್ನು ಗೆದ್ದಿದೆ. ಮಿತ್ರಪಕ್ಷವಾದ ಜತಿಯಾ ಪಕ್ಷ ಒಂಬತ್ತು ಸ್ಥಾನಗಳನ್ನು ಗೆದ್ದಿದೆ ಎಂದು ಸೊಮೊಯ್ ಟಿವಿ ವರದಿ ಮಾಡಿದೆ. ಗೆದ್ದ ಪ್ರಮುಖರದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶೇಖ್ ಅಲ್ ಹಸನ್ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News