ಮಲ್ಯ ಆಸ್ತಿ ಮಾರಾಟದಿಂದ ಬ್ಯಾಂಕ್‌ಗಳಿಗೆ 14 ಸಾವಿರ ಕೋಟಿ ವಾಪಾಸು: ನಿರ್ಮಲಾ

Update: 2024-12-18 02:34 GMT

PC: X.com

ಹೊಸದಿಲ್ಲಿ: ಬಹುಕೋಟಿ ಬ್ಯಾಂಕ್ ವಂಚನೆ ಹಗರಣಗಳಲ್ಲಿ ಷಾಮೀಲಾದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರ ಆಸ್ತಿಗಳ ಮಾರಾಟದಿಂದ ಬಂದ 14 ಸಾವಿರ ಕೋಟಿ ರೂಪಾಯಿಗಳನ್ನು ಕಾನೂನು ಜಾರಿ ನಿರ್ದೇಶನಾಲಯ ಬ್ಯಾಂಕ್‌ಗಳಿಗೆ ಮರಳಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಬಹಿರಂಗಪಡಿಸಿದರು.

ವಜ್ರದ ವ್ಯಾಪಾರಿ ನೀರವ್ ಮೋದಿಯವರಿಂದ 1053 ಕೋಟಿ ಸೇರಿದಂತೆ ವಿವಿಧ ಹಗರಣಗಳಲ್ಲಿ ಷಾಮೀಲಾದವರಿಂದ ಒಟ್ಟು 22280 ಕೋಟಿ ರೂಪಾಯಿಗಳನ್ನು ಸಂತ್ರಸ್ತರಿಗೆ ವಾಪಾಸು ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

 ಬ್ಯಾಂಕ್‌ಗಳು ಮತ್ತು ಕಾನೂನು ಜಾರಿ ನಿರ್ದೇಶನಾಲಯ ಜಂಟಿಯಾಗಿ ಮುಂಬೈ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಮತ್ತೊಬ್ಬ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯವರಿಗೆ ಸೇರಿದ ಆಸ್ತಿಗಳ ಮಾರಾಟಕ್ಕೆ ಅನುಮತಿ ಕೋರಿದೆ. ನೀರವ್ ಮೋದಿ ಜತೆ ಸೇರಿ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂಪಾಯಿಗಳನ್ನು ವಂಚಿಸಿ ದೇಶದಿಂದ ಪಲಾಯನ ಮಾಡಿದ್ದ.

ಕಾನೂನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡ 2566 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳ ಮೌಲ್ಯಮಾಪನ ಮತ್ತು ಹರಾಜು ನಡೆಸಿ ಬಂದ ಮೊತ್ತವನ್ನು ಪಿಎನ್‌ಬಿ ಹಾಗೂ ಇತರ ಸಮಾಪನಾದಾರರ ನಿಶ್ಚಿತ ಠೇವಣಿ ಖಾತೆಯಲ್ಲಿ ಇಡುವಂತೆ ವಿಶೇಷ ನ್ಯಾಯಾಲಯವು ಸೂಚನೆ ನೀಡಿದೆ.

ಪೂರಕ ಅನುದಾನ ಬೇಡಿಕೆಗಳ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಿದ ಹಣಕಾಸು ಸಚಿವರು, "ಪಿಎಂಎಲ್ಎ ಕಾನೂನು ಚೌಕಟ್ಟಿನಲ್ಲಿ ಆಸ್ತಿಗಳನ್ನು ಅದರ ಕಾನೂನುಬದ್ಧ ಮಾಲೀಕರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾನೂನು ಜಾರಿ ನಿರ್ದೇಶನಾಲಯ ಮಹತ್ವದ ಪ್ರಗತಿ ಸಾಧಿಸಿದೆ" ಎಂದು ಸ್ಪಷ್ಟಪಡಿಸಿದರು.

ಅಮಾಯಕರ ಆಸ್ತಿಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದು ಎಂದು ನಿರ್ಧರಿಸಲಾದ ಪ್ರಕರಣಗಳಲ್ಲಿ ಅಂಥ ಆಸ್ತಿಗಳನ್ನು ಸರಿಯಾದ ಮಾಲೀಕರಿಗೆ ವಾಪಾಸು ಮಾಡಲು ಅನುವು ಮಾಡಿಕೊಡುವ ಪಿಎಂಎಲ್ಎ ಸೆಕ್ಷನ್ 8(7) ಮತ್ತು 8(8)ನ್ನು ನಿರ್ದೇಶನಾಲಯ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News