ಬಿಹಾರ | 350ಕ್ಕೂ ಹೆಚ್ಚು ಸೇತುವೆ, ಮೋರಿಗಳ ತುರ್ತು ದುರಸ್ತಿ ಅಗತ್ಯ: ಅಧಿಕಾರಿಗಳು
ಪಾಟ್ನಾ: ಬಿಹಾರದಲ್ಲಿ 350ಕ್ಕೂ ಹೆಚ್ಚು ಸೇತುವೆ, ಮೋರಿಗಳ ತುರ್ತು ದುರಸ್ತಿ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡಾ ಉಪಸ್ಥಿತರಿದ್ದ ಗ್ರಾಮೀಣ ಕಾಮಗಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸೂಕ್ತ ಕ್ರಮಕ್ಕಾಗಿ ಇಂತಹ 1000ಕ್ಕೂ ಹೆಚ್ಚು ನಿರ್ಮಾಣಗಳ ಸಮೀಕ್ಷೆ ಅಗತ್ಯವಿದೆ ಎಂದು ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಯಿತು. ರಸ್ತೆ ಸಂಪರ್ಕವನ್ನು ಸುಧಾರಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಸೇತು ನಿರ್ಮಾಣ ಯೋಜನೆಯನ್ನು ಆರಂಭಿಸುವಂತೆ ಮುಖ್ಯಮಂತ್ರಿ ಈ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಹಾನಿಗೀಡಾಗಿರುವ ಸೇತುವೆ ಮತ್ತು ಮೋರಿಗಳ ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳುವಂತೆಯೂ ಅವರು ಆದೇಶಿಸಿದರು.
ಹೊಸ ಜನವಸತಿ ಪ್ರದೇಶಗಳ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಸೇತುವೆ ಮತ್ತು ಮೋರಿಗಳ ನಿರ್ಮಾಣ ಸೇರಿದಂತೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಿದೆ. ಕೇವಲ ಸೇತುವೆ ಮತ್ತು ರಸ್ತೆಗಳ ನಿರ್ಮಾಣವಷ್ಟೇ ಅಭಿವೃದ್ಧಿಯಲ್ಲ. ಅವುಗಳ ನಿರ್ವಹಣೆ ಕೂಡಾ ಮುಖ್ಯ. ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಮ್ಮ ಸರ್ಕಾರದ ಮುಖ್ಯ ಗಮನ ಎಂದು ಸ್ಪಷ್ಟಪಡಿಸಿದ್ದಾರೆ.
ಕಿರುಸೇತುವೆಗಳ ನಿರ್ಮಾಣ ವೆಚ್ಚವನ್ನು 25 ಲಕ್ಷ ರೂಪಾಯಿಗಳಿಂದ 50 ಲಕ್ಷ ರೂಪಾಯಿಗಳಿಗೆ ಏರಿಸುವ ಮೂಲಕ ಇಂಥ ಯೋಜನೆಗಳಿಗೆ ಅನುಮೋದನೆ ನೀಡುವ ಸ್ವಾತಂತ್ರ್ಯವನ್ನು ಜಿಲ್ಲಾಧಿಕಾರಿಗಳಿಗೆ ನೀಡುವ ಬಗ್ಗೆ ಕೂಡಾ ಸರ್ಕಾರ ಚಿಂತನೆ ನಡೆಸಿದೆ ಎಂದು ಸರ್ಕಾರ ಹೇಳಿದೆ.
"ಸೇತುವೆ ಕುಸಿತ ಅಥವಾ ಬಿರುಕು ಬಿಡುವುದನ್ನು ತಡೆಯಲು ಎಲ್ಲ ಸೇತುವೆ, ಕಿರುಸೇತುವೆ ಮತ್ತು ಮೋರಿಗಳ ಸೂಕ್ತ ತಪಾಸಣೆ ಮತ್ತು ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.