ಅಸ್ಸಾಂ| ತನ್ನದೇ ಪಕ್ಷದ ನಾಯಕನೊಂದಿಗಿರುವ ಖಾಸಗಿ ಚಿತ್ರಗಳು ವೈರಲ್: ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ನಾಯಕಿ
ಗುವಾಹಟಿ: ಅಸ್ಸಾಂನ ಬಿಜೆಪಿ ಮಹಿಳಾ ನಾಯಕಿಯೊಬ್ಬರು ಪಕ್ಷದ ಮತ್ತೊಬ್ಬ ಹಿರಿಯ ರಾಜಕಾರಣಿಯೊಂದಿಗೆ ಇರುವ ಕೆಲವು ಖಾಸಗಿ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆಂದು news18.com ವರದಿ ಮಾಡಿದೆ.
ಗುವಾಹಟಿಯ ಬಾಮುನಿಮೈದಂ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮೃತರನ್ನು ರಾಜ್ಯ ಬಿಜೆಪಿಯ ಪ್ರಮುಖ ಸದಸ್ಯೆ ಇಂದ್ರಾಣಿ ತಹಬಿಲ್ದಾರ್ ಎಂದು ಗುರುತಿಸಲಾಗಿದೆ.
ಚೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷೆಯಾಗಿದ್ದ ಇಂದ್ರಾಣಿ ಅವರು, ಕಿಸಾನ್ ಮೋರ್ಚಾದ ಖಜಾಂಚಿ ಕೂಡ ಆಗಿದ್ದರು.
ಮೂಲಗಳ ಪ್ರಕಾರ, ಇಂದ್ರಾಣಿ ಅವರು ತಮ್ಮ ಮನೆಯಲ್ಲಿ ಬಾಡಿಗೆದಾರನಾಗಿ ಉಳಿದುಕೊಂಡಿದ್ದ ಬಿಜೆಪಿ ನಾಯಕನೊಂದಿಗೆ ಇರುವ ಕೆಲವು ಖಾಸಗಿ ಚಿತ್ರಗಳು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಇದರಿಂದ ಮನನೊಂದ ನಾಯಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
“ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನು ಅಸಹಜ ಸಾವು ಎಂದು ಪರಿಗಣಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಆದರೆ, ಇಲ್ಲಿಯವರೆಗೆ, ಖಾಸಗಿ ಚಿತ್ರಗಳು ಸೋರಿಕೆಯಾದ ಬಗ್ಗೆ ನಮಗೆ ಯಾವುದೇ ದೂರುಗಳು ಬಂದಿಲ್ಲ. ಆದರೆ ನಾವು ಪ್ರತಿಯೊಂದು ಆಯಾಮವನ್ನು ಪರಿಶೀಲಿಸುತ್ತಿದ್ದೇವೆ” ಎಂದು ಕೇಂದ್ರ ಗುವಾಹಟಿಯ ಡಿಸಿಪಿ ದೀಪಕ್ ಚೌಧರಿ ತಿಳಿಸಿದ್ದಾರೆ.
ಇಂದ್ರಾಣಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗುವಾಹಟಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.