ಇಂದಿರಾ ಗಾಂಧಿಯನ್ನು ನಿಜವಾದ ನಾಯಕಿ ಎಂದು ಹೊಗಳಿದ ಬಿಜೆಪಿ ಸಂಸದ ವರುಣ್ ಗಾಂಧಿ!

Update: 2023-12-22 12:55 GMT

ವರುಣ್ ಗಾಂಧಿ | Photo: PTI 

ಹೊಸದಿಲ್ಲಿ : ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಶುಕ್ರವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ನಿಜವಾದ ನಾಯಕಿ ಎಂದು ಶ್ಲಾಘಿಸಿದ್ದಾರೆ. 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವನ್ನು ಉಲ್ಲೇಖಿಸಿದ ಅವರು ನಿಜವಾದ ನಾಯಕರು ಎಂದೂ ಕೇವಲ ವಿಜಯದ ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

1971 ರ ಯುದ್ಧದಲ್ಲಿ ಐತಿಹಾಸಿಕ ವಿಜಯದ ನಂತರ ವರುಣ್ ಗಾಂಧಿ ಅವರು ಆಗಿನ ಸೇನಾ ಮುಖ್ಯಸ್ಥ ಜನರಲ್ ಸ್ಯಾಮ್ ಮಾಣಿಕ್ಷಾ ಅವರಿಗೆ ತಮ್ಮ ಅಜ್ಜಿ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ.

"ವಿಶಾಲ ಹೃದಯ ಇರುವ ನಿಜವಾದ ನಾಯಕನಿಗೆ ಗೆಲುವಿನಲ್ಲಿ ಇಡೀ ತಂಡದ ಪಾತ್ರ ಮುಖ್ಯ ಎಂದು ತಿಳಿದಿದೆ. ಪಒಬ್ಬರೇ ಯಾವತ್ತೂ ಗೆಲುವಿನ ಕ್ರೆಡಿಟ್ ತೆಗೆದುಕೊಳ್ಳಬಾರದು ಎಂದು ತಿಳಿದಿದೆ, ”ಎಂದು ಬಿಜೆಪಿ ಸಂಸದರು ಹೇಳಿದ್ದಾರೆ.

ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾದ ವಿಜಯವನ್ನು ಸ್ಮರಿಸುತ್ತಾ, ವರುಣ್ ಗಾಂಧಿ, "ಈ ದಿನದಂದು ಭಾರತವು ಈ ಎರಡೂ ಮಹಾನ್ ಭಾರತೀಯ ಸಂಪತ್ತನ್ನು ವಂದಿಸುತ್ತದೆ" ಎಂದು ಬರೆದಿದ್ದಾರೆ.

ವರುಣ್ ಗಾಂಧಿ ಇತ್ತೀಚೆಗೆ ಬಿಜೆಪಿ ಸಭೆಗಳಲ್ಲಿ ಕಾಣಿಸಿಕೊಳ್ಳದೇ ಇರುವುದರಿಂದ ಅವರು ಕಾಂಗ್ರೆಸ್ ವಲಯಕ್ಕೆ ಹತ್ತಿರವಾಗುತ್ತಿದ್ದಾರೆ ಎಂಬ ಊಹಾಪೋಹದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರೂ ಆಗಿರುವ ಅವರ ಮಾತುಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕಳೆದ ತಿಂಗಳು, ಸೋದರ ಸಂಬಂಧಿಗಳಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ವರುಣ್ ಗಾಂಧಿ ಉತ್ತರಾಖಂಡದ ಕೇದಾರನಾಥ ದೇಗುಲದಲ್ಲಿ "ಅನಿರೀಕ್ಷಿತ"ವಾಗಿ ಭೇಟಿಯಾಗಿದ್ದರು.

ಇಬ್ಬರೂ ನಾಯಕರು ಮಹತ್ವವನ್ನು ತಳ್ಳಿಹಾಕಿದರೂ, ಇದು ಅವರ ರಾಜಕೀಯ ಉದ್ದೇಶಗಳ ಬಗ್ಗೆ ಕೆಲವು ವಲಯಗಳಲ್ಲಿ ಊಹಾಪೋಹಗಳಿಗೆ ಕಾರಣವಾಯಿತು.

ಈ ವರ್ಷದ ಸೆಪ್ಟೆಂಬರ್‌ನಲ್ಲಿ, ರೋಗಿಯೊಬ್ಬರ ಸಾವಿನ ನಂತರ ಅಮೇಥಿಯ ಸಂಜಯ್ ಗಾಂಧಿ ಆಸ್ಪತ್ರೆಯ ಪರವಾನಗಿಯನ್ನು ಅಮಾನತುಗೊಳಿಸಿದ ಬಗ್ಗೆ ವರುಣ್ ಗಾಂಧಿ ಉತ್ತರ ಪ್ರದೇಶದ ತಮ್ಮದೇ ಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News