ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಹಾಗೂ ಪ್ರಜ್ಞಾನಂದರನ್ನು ಉಲ್ಲೇಖಿಸಿದ್ದೇಕೆ?
ಹೊಸ ದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಭಾರತದ ಚೆಸ್ ಪಟುಗಳ ಅದ್ವಿತೀಯ ಸಾಧನೆಯನ್ನು ಪ್ರಸ್ತಾಪಿಸಿ ಗಮನ ಸೆಳೆದರು ಎಂದು indianexpress.com ವರದಿ ಮಾಡಿದೆ.
ಭಾರತದ ಕ್ರೀಡೆಯಲ್ಲಿನ ಸಾಧನೆಯನ್ನು ಕುರಿತು ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್, ಚೆನ್ನೈ ಮೂಲದ 18 ವರ್ಷದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದರ ಹೆಸರನ್ನು ಉಲ್ಲೇಖಿಸಿ, ಅವರನ್ನು ಪ್ರಶಂಸಿಸಿದರು.
“ಕ್ರೀಡೆಯಲ್ಲಿ ಭಾರತವು ಹೊಸ ಎತ್ತರಕ್ಕೆ ತಲುಪಿರುವುದರಿಂದ ಇಡೀ ದೇಶ ಹೆಮ್ಮೆಯಿಂದ ಬೀಗುತ್ತಿದೆ. ಚೆಸ್ ಪಟು ಹಾಗೂ ನಂ. 1 ಶ್ರೇಯಾಂಕದ ಆರ್. ಪ್ರಜ್ಞಾನಂದ ಅವರು 2023ರಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ತೀವ್ರ ಪೈಪೋಟಿ ನೀಡಿದರು. 2010ರಲ್ಲಿದ್ದ ಕೇವಲ 10 ಮಂದಿ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಗಳಿಗೆ ಹೋಲಿಸಿದರೆ, ಇದೀಗ ಭಾರತದ 80 ಮಂದಿ ಗ್ರ್ಯಾಂಡ್ ಮಾಸ್ಟರ್ ಗಳಿದ್ದಾರೆ” ಎಂದು ಹೇಳಿದರು. ನಿರ್ಮಲಾರ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಮೇಜು ಕುಟ್ಟಿ ಸ್ವಾಗತಿಸಿದರು.
ನಿರ್ಮಲಾ ಸೀತಾರಾಮನ್ ಭಾರತವು ಕ್ರೀಡೆಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಉದಾಹರಿಸಲು ಆರ್.ಪ್ರಜ್ಞಾನಂದರ ಹೆಸರನ್ನು ಉಲ್ಲೇಖಿಸಿದ್ದು, ಹ್ಯಾಂಗ್ ಝೌ ನಲ್ಲಿ ಆಯೋಜನೆಗೊಂಡಿದ್ದ ಏಶ್ಯನ್ ಕ್ರೀಡಾಕೂಟದಲ್ಲಿನ ಭಾರತದ ಸಾಧನೆಯನ್ನೂ ಕೊಂಡಾಡಿದರು.
“2023ರ ಏಶ್ಯನ್ ಗೇಮ್ಸ್ ಹಾಗೂ ಏಶ್ಯ್ನ್ ಪ್ಯಾರಾ ಗೇಮ್ಸ್ ಕ್ರೀಡಾಕೂಟಗಳಲ್ಲಿ ಭಾರತವು ಇದುವರೆಗಿನ ಅತ್ಯಧಿಕ ಪದಕಗಳನ್ನು ಜಯಿಸಿದೆ” ಎಂದು ಪಿಐಬಿ ಮಾಡಿರುವ ಎಕ್ಸ್ ಪೋಸ್ಟ್ ಅನ್ನು ಉಲ್ಲೇಖಿಸಿ ಅವರು ಹೇಳಿದರು.