́ಬಂಗಾಳ ಬಂದ್ʼ| ಕೋಲ್ಕತಾದಲ್ಲಿ ಬಿಗಿ ಭದ್ರತೆ ; ಹೆಲ್ಮೆಟ್ ಧರಿಸಿದ ಬಸ್ ಚಾಲಕರು
ಕೋಲ್ಕತಾ : ‘ನಬನ್ನಾ ಅಭಿಯಾನ’ದ ಪ್ರತಿಭಟನಾ ರ‍್ಯಾಲಿಯಲ್ಲಿ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ 12 ಗಂಟೆಗಳ ಕಾಲ ‘ಬಂಗಾಳ ಬಂದ್’ಗೆ ಕರೆ ನೀಡಿದೆ. ಮುನ್ನಚ್ಚರಿಕಾ ಕ್ರಮವಾಗಿ ಕೋಲ್ಕತಾ ನಗರದಾದ್ಯಂತ ಪೊಲೀಸರು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರಿ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರಿಗೆ ಹೆಲ್ಮೆಟ್ ಧರಿಸಲು ಸೂಚನೆ ನೀಡಲಾಗಿದೆ. ಅದರಂತೆ ಕೂಚ್ ಬೆಹಾರ್‌ನಲ್ಲಿ ಎನ್‌ಬಿಎಸ್‌ಟಿಸಿ ಬಸ್‌ಗಳ ಚಾಲಕರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಬಸ್ ಚಾಲಕರೊಬ್ಬರು, ‘ಬಂದ್‌ಗೆ ಕರೆ ನೀಡಿರುವುದರಿಂದ ಸಾರಿಗೆ ಸಂಸ್ಥೆಯೇ ಎಲ್ಲರಿಗೂ ಹೆಲ್ಮೆಟ್‌ಗಳನ್ನು ನೀಡಿದೆ. ಮುಂಜಾಗ್ರತ ಕ್ರಮವಾಗಿ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ಆಗಸ್ಟ್ 9ರಂದು ಕೋಲ್ಕತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆ ಖಂಡಿಸಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಮಂಗಳವಾರ ‘ನಬನ್ನಾ ಅಭಿಯಾನ್’ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಪಶ್ಚಿಮ ಬಂಗಾಳ ಸರಕಾರದ ಸಚಿವಾಲಯದ ಕಡೆ ನುಗ್ಗಲು ಪ್ರಯತ್ನಿಸಿದಾಗ ಕೋಲ್ಕತಾ ಮತ್ತು ಹೌರಾದಲ್ಲಿ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಸಂಘರ್ಷ ಉಂಟಾಗಿತ್ತು. ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲು, ಇಟ್ಟಿಗೆಗಳನ್ನು ಎಸೆದಿದ್ದರು. ಅವರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಚ್ ಮಾಡಿದ್ದರು. ಜಲಫಿರಂಗಿ, ಅಶ್ರುವಾಯು ಶೆಲ್ ಕೂಡ ಪ್ರಯೋಗಿಸಿದ್ದರು ಎಂದು ತಿಳಿದು ಬಂದಿದೆ.
ರಾಜ್ಯದ ಸಚಿವಾಲಯದ ಕಡೆ ಸಾಗುವ ಮಾರ್ಗಕ್ಕೆ ಅಡ್ಡವಾಗಿ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಉರುಳಿಸಲು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ಯತ್ನಿಸಿದ್ದರು. ಇದರಿಂದಾಗಿ ನಡೆದ ಘರ್ಷಣೆಯಲ್ಲಿ ಪೊಲೀಸರು ಹಾಗೂ ಪ್ರತಿಭಟನಕಾರರು ಗಾಯಗೊಂಡಿದ್ದರು.