ಮಾದಕ ದ್ರವ್ಯ ಪ್ರಕರಣದ ಜತೆ ಸ್ಟಾಲಿನ್ ಗೆ ನಂಟು ಆರೋಪ: ಇಪಿಎಸ್, ಅಣ್ಣಾಮಲೈ ವಿರುದ್ಧ ಮಾನ ಹಾನಿ ಮೊಕದ್ದಮೆ ದಾಖಲು
ಚೆನ್ನೈ: ಅಂತರ್ ರಾಷ್ಟ್ರೀಯ ಮಾದಕ ದ್ರವ್ಯ ಸಾಗಾಟ ಗುಂಪಿನೊಂದಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಂಟು ಹೊಂದಿದ್ದಾರೆ ಎಂದು ಆರೋಪಿಸಿರುವುದಕ್ಕಾಗಿ ಎಐಎಡಿಎಂಕೆಯ ಇ.ಕೆ. ಪಳನಿಸ್ವಾಮಿ (ಇಪಿಎಸ್) ಹಾಗೂ ಬಿಜೆಪಿ ವರಿಷ್ಠ ಅಣ್ಣಾಮಲೈ ಅವರ ವಿರುದ್ಧ ತಮಿಳುನಾಡು ಸರಕಾರ ಗುರುವಾರ ಮಾನ ಹಾನಿ ಮೊಕದ್ದಮೆ ದಾಖಲಿಸಿದೆ.
ಈ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಡಿಎಂಕೆಯ ಪದಾಧಿಕಾರಿ ಜಾಫರ್ ಸಾದಿಕ್ ಅವರನ್ನು ಬಂಧಿಸಲಾಗಿತ್ತು.
ಚೆನ್ನೈ ನಗರದ ಪ್ರಾಸಿಕ್ಯೂಟರ್ ಪ್ರಾಥಮಿಕ ಸೆಷನ್ಸ್ ನ್ಯಾಯಾಲಯದಲ್ಲಿ ಈ ಮಾನ ಹಾನಿ ಮೊಕದ್ದಮೆ ದಾಖಲಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ಪೋಸ್ಟ್ ಗಳು ಹಾಗೂ ಇ.ಪಿ.ಎಸ್, ಅಣ್ಣಾಮಲೈ ಅವರ ವೀಡಿಯೊಗಳನ್ನು ಉಲ್ಲೇಖಿಸಿರುವ ಮಾನ ಹಾನಿ ಮೊಕದ್ದಮೆ, ಮಾದಕ ದ್ರವ್ಯ ಸಾಗಾಟಗಾರರ ನೆರವಿನಿಂದ ಸ್ಯೂಡೋಫೆಡ್ರಿನ್ನಂತಹ ಮಾದಕ ದ್ರವ್ಯದ ವಿತರಣೆಯಲ್ಲಿ ಸ್ಟಾಲಿನ್ ಭಾಗಿಯಾಗಿದ್ದಾರೆ ಎಂದು ಈ ಇಬ್ಬರು ನಾಯಕರು ಆರೋಪಿಸಿದ್ದಾರೆ ಎಂದು ಹೇಳಿದೆ.
‘‘ಆರೋಪಿಗಳು ರಾಜಕೀಯ ದ್ವೇಷದಿಂದ ಈ ಆರೋಪ ಮಾಡಿದ್ದಾರೆ. ಈ ಮೂಲಕ ಗೌರವಾನ್ವಿತ ಮುಖ್ಯಮಂತ್ರಿಯ ಪ್ರತಿಷ್ಠೆಗೆ ಧಕ್ಕೆ ಉಂಟು ಮಾಡಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದ್ದಾರೆ’’ ಎಂದು ಮೊಕದ್ದಮೆ ಹೇಳಿದೆ.
ತಮಿಳುನಾಡಿನಲ್ಲಿ ಮಾದಕ ದ್ರವ್ಯಗಳ ಮಾರಾಟ, ವಿತರಣೆ ಹಾಗೂ ಬಳಕೆಯನ್ನು ಬೇಧಿಸಲು ಎಂ.ಕೆ. ಸ್ಟಾಲಿನ್ ಹಾಗೂ ಅವರ ಸರಕಾರ ತೆಗೆದುಕೊಂಡಿರುವ ವಿವಿಧ ಕ್ರಮಗಳ ಬಗ್ಗೆ ಕೂಡ ಮೊಕದ್ದಮೆ ಬೆಳಕು ಚೆಲ್ಲಿದೆ.