ಕೋಚಿಂಗ್ ಸೆಂಟರ್‌ಗಳಿಂದ ತಪ್ಪುದಾರಿಗೆಳೆಯುವ ಜಾಹೀರಾತುಗಳ ತಡೆಗೆ ಕೇಂದ್ರದ ಮಾರ್ಗಸೂಚಿ
ಹೊಸದಿಲ್ಲಿ : ಕೋಚಿಂಗ್ ಸಂಸ್ಥೆಗಳಿಂದ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನಿಯಂತ್ರಿಸಲು ಹಾಗೂ ಶೇ.100 ಶೇಕಡಾ ಆಯ್ಕೆ ಅಥವಾ 100 ಶೇಕಡಾ ಉದ್ಯೋಗ ಭದ್ರತೆಯಂತಹ ಸುಳ್ಳು ಹೇಳಿಕೆಗಳನ್ನು ನಿಷೇಧಿಸಲು ಕೇಂದ್ರವು ಬುಧವಾರ ನೂತನ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು ಅನೇಕ ದೂರುಗಳನ್ನು ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ)ವು ರಚಿಸಿರುವ ಅಂತಿಮ ಮಾರ್ಗಸೂಚಿಗಳು ಹೊರಬಿದ್ದಿವೆ. ಸಿಸಿಪಿಎ 54 ನೋಟಿಸ್‌ಗಳನ್ನು ಹೊರಡಿಸಿದ್ದು, ಈವರೆಗೆ ಸುಮಾರು 54.60 ಲಕ್ಷ ರೂ.ದಂಡಗಳನ್ನು ವಿಧಿಸಿದೆ.
‘ಕೋಚಿಂಗ್ ಸೆಂಟರ್‌ಗಳು ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಿಂದ ಮಾಹಿತಿಗಳನ್ನು ಬಚ್ಚಿಡುವುದನ್ನು ನಾವು ಗಮನಿಸಿದ್ದೇವೆ. ಹೀಗಾಗಿ ಕೋಚಿಂಗ್ ಉದ್ಯಮದಲ್ಲಿ ತೊಡಗಿಕೊಂಡಿರುವ ಜನರಿಗೆ ಮಾರ್ಗದರ್ಶನ ನೀಡಲು ಮಾರ್ಗಸೂಚಿಗಳನ್ನು ಹೊರಡಿಸಿದ್ದೇವೆ ’ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ಅವರು ಸುದ್ದಿಗಾರರಿಗೆ ತಿಳಿಸಿದರು.
ಸರಕಾರವು ಕೋಚಿಂಗ್ ಸೆಂಟರ್‌ಗಳ ವಿರುದ್ಧವಾಗಿಲ್ಲ,ಆದರೆ ಜಾಹೀರಾತುಗಳು ಗ್ರಾಹಕ ಹಕ್ಕುಗಳನ್ನು ದುರ್ಬಲಗೊಳಿಸಬಾರದು ಎಂದರು.
ನೂತನ ಮಾರ್ಗಸೂಚಿಗಳಡಿ ಕೋಚಿಂಗ್ ಸೆಂಟರ್‌ಗಳು ತಾವು ಒದಗಿಸುವ ಕೋರ್ಸ್‌ಗಳು ಮತ್ತು ಅವಧಿ, ಅಧ್ಯಾಪಕರ ಬೋಧನಾರ್ಹತೆ,ಶುಲ್ಕ ಸ್ವರೂಪ ಮತ್ತು ಮರುಪಾವತಿ ನೀತಿಗಳು, ಆಯ್ಕೆ ಮತ್ತು ಪರೀಕ್ಷಾ ಶ್ರೇಯಾಂಕಗಳು, ಉದ್ಯೋಗ ಭದ್ರತೆ ಖಾತರಿ ಮತ್ತು ಅಥವಾ ವೇತನ ಏರಿಕೆ ಕುರಿತು ಸುಳ್ಳು ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ.
ಮಾರ್ಗಸೂಚಿಗಳ ‘ಕೋಚಿಂಗ್’ ವ್ಯಾಖ್ಯೆಯು ಶೈಕ್ಷಣಿಕ ಬೆಂಬಲ, ಶಿಕ್ಷಣ,ಮಾರ್ಗದರ್ಶನ,ಅಧ್ಯಯನ ಕಾರ್ಯಕ್ರಮಗಳು ಮತ್ತು ಬೋಧನೆಯನ್ನು ಒಳಗೊಂಡಿವೆ,ಆದರೆ ಸಮಾಲೋಚನೆ,ಕ್ರೀಡೆಗಳು ಮತ್ತು ರಚನಾತ್ಮಕ ಚಟುವಟಿಕೆಗಳನ್ನು ವ್ಯಾಖ್ಯೆಯಲ್ಲಿ ಸೇರಿಸಲಾಗಿಲ್ಲ.