ಕೇಂದ್ರ ಬಿಜೆಪಿ ಸರ್ಕಾರದಿಂದ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳನ್ನು ವಿಫಲಗೊಳಿಸುವ ಹುನ್ನಾರ: ದಿನೇಶ್ ಗುಂಡೂರಾವ್

Update: 2024-02-13 09:37 GMT

ವಯನಾಡು: ಗ್ಯಾರಂಟಿ ಯೋಜನೆಗಳು ಭ್ರಷ್ಟರಹಿತವಾಗಿ ನೇರವಾಗಿ ಜನರಿಗೆ ಆರ್ಥಿಕ ನೆರವು ನೀಡುತ್ತಿರುವುದನ್ನ ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ.ಬಡಜನರಿಗೆ ಆರ್ಥಿಕವಾಗಿ ನೆರವು ಒದಗಿಸುತ್ತಿರುವ ಗ್ಯಾರಂಟಿ ಯೋಜನೆಗಳನ್ನ ವಿಫಲಗೊಳಿಸುವ ಉದ್ದೇಶದಿಂದ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ತನ್ನ ತೆರಿಗೆ ಪಾಲನ್ನ ನೀಡದೆ ಹುನ್ನಾರ ನಡೆಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

 ರಾಹುಲ್ ಗಾಂಧಿ ಅವರು ಪ್ರತಿನಿಧಿಸುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಪರ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ವಯನಾಡಿನ ಕಲ್ಪಟ್ಟಾದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಪರ ಮತಯಾಚಿಸಿದ ಸಚಿವ ದಿನೇಶ್ ಗುಂಡೂರಾವ್, ಕೇರಳ ಜನತೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸುವಂತೆ ಮನವಿ ಮಾಡಿದರು.‌ ಕೇಂದ್ರ ಬಿಜೆಪಿ ಸರ್ಕಾರ ಯಾರ ಮಾತನ್ನ ಕೇಳಿಸಿಕೊಳ್ಳುವ ಸೌಜನ್ಯವನ್ನು ತೋರಿಸುತ್ತಿಲ್ಲ. ತೆರಿಗೆ ಹಂಚಿಕೆ ವಿಚಾರದಲ್ಲಿ ಒಂದು ಕೈಗೆ ಮೊಸರು ಇನ್ನೊಂದು ಕೈಗೆ ಕೆಸರೆರಚುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.‌

ಕರ್ನಾಟಕದಲ್ಲಿ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನ ವಿಫಲಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಒಳಗೊಳಗೆ ಹುನ್ನಾರ ನಡೆಸಿದೆ. ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನೀಡಬೇಕಾದ ನ್ಯಾಯಯುತ ತೆರಿಗೆ ಪಾಲನ್ನ ನೀಡುತ್ತಿಲ್ಲ. ಬಡ ಜನರಿಗೆ ಆರ್ಥಿಕ ನೆರವು ಸಿಗುತ್ತಿರುವುದು ಬಿಜೆಪಿ ಏಕೆ ಸಹಿಸಿಕೊಳ್ಳುತ್ತಿಲ್ಲ ಎಂದು ಗುಂಡೂರಾವ್ ಪ್ರಶ್ನಿಸಿದರು. ಶ್ರೀಮಂತ ಉದ್ಯಮಿಗಳ ಸಾವಿರಾರು ಕೋಟಿ ಸಾಲಮನ್ನಾ ಮಾಡಿ, ಬಡಜನರ ಮೇಲೆ ತೆರಿಗೆ ಭಾರ ಹೇರುತ್ತಿದೆ. ನಮ್ಮ ತೆರಿಗೆ ಪಾಲನ್ನು ನಮಗೆ ನೀಡದೆ ಹೊಟ್ಟೆ ತುಂಬಿದವರ ಜೇಬು ತುಂಬಿಸುತ್ತಿದೆ. ಇದು ಯಾವ ಸೀಮೆ ನ್ಯಾಯ ಎಂದು ಬಿಜೆಪಿ ವಿರುದ್ಧ ಗುಂಡೂರಾವ್ ಗುಡುಗಿದರು.‌

ಕೇಂದ್ರ ಸಂಸ್ಥೆಗಳನ್ನ ದುರುಪಯೋಗಪಡಿಸಿಕೊಂಡು ಸೇಡಿನ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಈ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು. ಸಂವಿಧಾನ ರಕ್ಷಣೆಗಾಗಿ, ಜನಪರ ಆಡಳಿತ ನಡೆಸುವಂತ ಸರ್ಕಾರ ರಚನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕೆಂದು ಸಾರ್ವಜನಿಕರಲ್ಲಿ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News