ರಾಜ್ಯಗಳಿಗೆ ಮನ್‌ರೇಗಾ ಅಡಿ ರೂ. 6,366 ಕೋಟಿ ಬಾಕಿಯಿರಿಸಿದ ಕೇಂದ್ರ
ಹೊಸದಿಲ್ಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ವಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ರೂ. 6,366 ಕೋಟಿ ಬಾಕಿ ಇನ್ನಷ್ಟೇ ಪಾವತಿಸಬೇಕಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ. ಕಾಂಗ್ರೆಸ್ ಸಂಸದೆ ರಮ್ಯಾ ಹರಿದಾಸ್ ಅವರು ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಲಾಗಿದೆ.
ಕೇಂದ್ರ ಸರ್ಕಾರ ಈ ಯೋಜನೆಯಡಿ ಪಶ್ಚಿಮ ಬಂಗಾಳಕ್ಕೆ ಗರಿಷ್ಠ ರೂ. 2,770 ಕೋಟಿ ಬಾಕಿಯಿರಿಸಿದೆ, ಇದು ಐದು ತಿಂಗಳಿಗೂ ಹೆಚ್ಚು ಸಮಯದಿಂದ ಬಾಕಿಯಿದೆ ಎಂದು ಸಚಿವೆ ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯ ಸೆಕ್ಷನ್ 27ರ ಅಡಿಯಲ್ಲಿ ಅನುದಾನ ಬಿಡುಗಡೆಯನ್ನು ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಹೇಳಿಕೊಂಡಿದೆ. ಈ ಯೋಜನೆಯಡಿ ಬಿಡುಗಡೆಯಾದ ಹಣವನ್ನು ಸೂಕ್ತ ಉದ್ದೇಶಗಳಿಗೆ ಬಳಕೆಯಾಗಿಲ್ಲ ಎಂದು ದೂರುಗಳು ಬಂದಲ್ಲಿ ಹಣ ಬಿಡುಗಡೆ ನಿಲ್ಲಿಸಿ ತನಿಖೆ ನಡೆಸುವ ಅಧಿಕಾರವನ್ನು ಈ ಕಾನೂನು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.