ಬ್ರಹ್ಮಪುತ್ರ ತೀರದ ದಿಕ್ಕು ಬದಲಿಸಿದ ʼಅಸ್ಸಾಂ ವಾಲಿಬಾಲ್ ಮಿಷನ್ 100ʼ

Update: 2024-02-11 17:14 GMT

Photo: indiatoday.in

ದಿಸ್ಪುರ್: 23 ವರ್ಷದ ಬಹಾಝುದ್ದೀನ್‌ಗೆ ಮುಂದಿನ ಮಳೆಯಲ್ಲಿ ತನ್ನ ಮನೆ ಉಳಿಯುತ್ತದೋ ಇಲ್ಲವೊ ತಿಳಿದಿಲ್ಲ. ಆದರೆ, ಆತನ ತಕ್ಷಣದ ಕಾಳಜಿ ತನ್ನ ಗ್ರಾಮದ ವಾಲಿಬಾಲ್ ತಂಡ.

ಬಹಾಝುದ್ದೀನ್‌ ತನ್ನ ರೂಪವನ್ನು ಆಗಾಗ ಬದಲಿಸುವ ಬ್ರಹ್ಮಪುತ್ರ ನದಿಯ ದ್ವೀಪವಾದ ಮಜರ್ ಚಾರ್ ನಿವಾಸಿಯಾಗಿದ್ದಾರೆ. ಒಂದು ವೇಳೆ ಚಾರ್‌ಗಳು (ನದಿಯ ದ್ವೀಪಗಳು) ತಮ್ಮ ಮೂಲಕ್ಕೆ ಬ್ರಹ್ಮಪುತ್ರ ನದಿ ಕಾರಣವೆಂದು ಪ್ರತಿಪಾದಿಸಿದರೆ, ಅಂತಹ ಶಕ್ತಿಶಾಲಿ ನದಿಯೇ ಅವುಗಳ ಪಾಲಿಗೆ ಅಪಾಯವೂ ಆಗಿದೆ.

ಮುಂದಿನ ಮಳೆಯ ಸಂದರ್ಭದಲ್ಲಿ ಬ್ರಹ್ಮಪುತ್ರ ನದಿಯೇನಾದರೂ ಉಕ್ಕೇರಿದರೆ ತನ್ನ ಮನೆ ಕೊಚ್ಚಿಕೊಂಡು ಹೋಗಬಹುದು ಎಂಬ ಆತಂಕ ಬಹಾಝುದ್ದೀನ್‌ ರಲ್ಲಿದ್ದರೂ, ಅವರ ತಕ್ಷಣದ ಕಾಳಜಿ ತಮ್ಮ ಗ್ರಾಮದ ಮಕ್ಕಳಿಗೆ ವಾಲಿಬಾಲ್ ತರಬೇತಿ ನೀಡುವುದು ಹಾಗೂ ಬ್ರಹ್ಮಪುತ್ರ ವಾಲಿಬಾಲ್ ಲೀಗ್‌ನಲ್ಲಿ ಅವರ ಪ್ರದರ್ಶನದ ಕುರಿತಾಗಿದೆ.

ಬಹುತೇಕ ನದಿಯ ದ್ವೀಪಗಳಂತೆ ಬಾರ್ಪೇಟ ಜಿಲ್ಲೆಯ ಮಜರ್ ಚಾರ್ ಕೂಡಾ ಅಸ್ಸಾಂ ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಈ ದ್ವೀಪದಿಂದ ಹತ್ತಿರದ ಮುಖ್ಯ ಭೂಪ್ರದೇಶಕ್ಕೆ ಮೋಟಾರು ಚಾಲಿತ ದೋಣಿಯಲ್ಲಿ ತಲುಪಲು 30 ನಿಮಿಷ ಹಿಡಿಯುತ್ತದೆ.

ಮಜರ್ ಚಾರ್‌ನ ಬಹುತೇಕ ಮಕ್ಕಳು ಹಾಗೂ ಹದಿಹರೆಯದ ಯುವಕರು ತಮ್ಮ ದ್ವೀಪದಿಂದ ಇದುವರೆಗೂ ಹೊರಗೆ ಕಾಲಿಟ್ಟಿಲ್ಲ. ಆದರೆ, ತಮ್ಮ ಮಕ್ಕಳಿಗೆ ಶೂ ಅನ್ನೂ ಒದಗಿಸಲಾಗದ ಕುಟುಂಬಗಳಿರುವ ಈ ಗ್ರಾಮದಲ್ಲಿ ಚೆಂಡು ಹಾಗೂ ತರಬೇತಿಯನ್ನು ಒದಗಿಸಲು ಬ್ರಹ್ಮಪುತ್ರ ವಾಲಿಬಾಲ್ ಲೀಗ್ ಮೂಲಕ ಅಂತಹ ಅವಕಾಶ ಅವರ ಬಳಿ ಬಂದಿದೆ.

2020ರಲ್ಲಿ ಕೋವಿಡ್ ಲಾಕ್‌ಡೌನ್ ಹೇರಿದಾಗ ಅಸ್ಸಾಂನಿಂದ ಭಾರತ ತಂಡದ ನಾಯಕರಾಗಿದ್ದ ಏಕೈಕ ವಾಲಿಬಾಲ್ ಆಟಗಾರ ಅಭಿಜಿತ್ ಭಟ್ಟಾಚಾರ್ಯ ಚಹಾ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಬಟ್ಟೆಯಿಂದ ತಯಾರಿಸಿದ ಚೆಂಡಿನ ಮೂಲಕ ವಾಲಿಬಾಲ್ ತರಬೇತಿ ನೀಡುವ ಉಪಕ್ರಮಕ್ಕೆ ಚಾಲನೆ ನೀಡಿದ್ದರು. ಇದೀಗ ಬ್ರಹ್ಮಪುತ್ರ ವಾಲಿಬಾಲ್ ಲೀಗ್‌ ಗೆ ವಿದೇಶಗಳಿಂದ ಪ್ರಾಯೋಜಕತ್ವ ದೊರೆಯುತ್ತಿದೆ.

ಅದೊಂದೇ ಅಲ್ಲ, ರಾಷ್ಟ್ರೀಯ ವಾಲಿಬಾಲ್ ತಂಡದಲ್ಲಿ ಶೂನ್ಯ ಉಪಸ್ಥಿತಿ ಹೊಂದಿರುವ ಅಸ್ಸಾಂ ರಾಜ್ಯವನ್ನು ಈ ವಿಶಿಷ್ಟ ಬೇರುಮಟ್ಟದ ಕ್ರೀಡಾ ಚಳವಳಿಯು ಜಾಗತಿಕ ವಾಲಿಬಾಲ್ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದೆ.

ವಾಲಿಬಾಲ್‌ನ ಅತ್ಯುನ್ನತ ಜಾಗತಿಕ ಆಡಳಿತಾತ್ಮಕ ಸಂಸ್ಥೆಯಾದ ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ವಾಲಿಬಾಲ್ ಬ್ರಹ್ಮಪುತ್ರ ವಾಲಿಬಾಲ್ ಲೀಗ್ ಅನ್ನು ವಿಶಿಷ್ಟ ಮಾದರಿ ಎಂದು ಗುರುತಿಸಿದ್ದು, ಬ್ರಹ್ಮಪುತ್ರ ವಾಲಿಬಾಲ್ ಲೀಗ್‌ನ ತರಬೇತುದಾರರಿಗೆ ತರಬೇತಿ ನೀಡಲು ಕ್ಯೂಬಾ, ಬ್ರೆಝಿಲ್ ಹಾಗೂ ಸೆರ್ಬಿಯಾದ ಮೂವರು ಒಲಿಂಪಿಕ್ ಚಿನ್ನದ ಪದಕದ ವಿಜೇತ ಆಟಗಾರರು ಹಾಗೂ ನೆದರ್ಲ್ಯಾಂಡ್ಸ್‌ನಿಂದ ಓರ್ವ ತಜ್ಞರನ್ನು ಅಸ್ಸಾಂಗೆ ಕಳಿಸಿಕೊಟ್ಟಿದೆ. ಇದೀಗ, ವಿದೇಶೀಯರೂ ಕೂಡಾ ಅಸ್ಸಾಂ ಮಕ್ಕಳಿಗೆ ಪ್ರಾಯೋಜಕತ್ವ ಒದಗಿಸುತ್ತಿದ್ದಾರೆ.

ಬ್ರಹ್ಮಪುತ್ರ ವಾಲಿಬಾಲ್ ಲೀಗ್ ಋತುವಿನಲ್ಲಿ ನೂರಾರು ಪಂದ್ಯಗಳಿಗೆ ವರ್ಷವಿಡೀ ಸಾವಿರಾರು ಮಕ್ಕಳಿಗೆ ತರಬೇತಿ ನೀಡುವುದರಿಂದ ಹಿಡಿದು, ಎಲ್ಲ ಪಂದ್ಯಗಳನ್ನೂ ನೇರ ಪ್ರಸಾರ ಸೌಕರ್ಯವನ್ನು ವ್ಯವಸ್ಥೆಗೊಳಿಸುವ ಸಮುದಾಯದ ಪ್ರಯತ್ನದವರೆಗೆ ಬ್ರಹ್ಮಪುತ್ರ ವಾಲಿಬಾಲ್ ಲೀಗ್ ಯಾವುದೇ ಕ್ರಾಂತಿಗಿಂತಲೂ ಕಡಿಮೆ ಇಲ್ಲದಂತಾಗಿದೆ. ಈ ಕ್ರಾಂತಿಯು ಅಸ್ಸಾಂ ಗ್ರಾಮಗಳನ್ನು ಪರಿವರ್ತನೆಗೊಳಿಸುತ್ತಿದ್ದು, ಶೀಘ್ರವೇ ಅದರ ಫಲಿತಾಂಶವನ್ನು ರಾಷ್ಟ್ರಮಟ್ಟದಲ್ಲಿ ನೋಡಬಹುದಾಗಿದೆ.

ಈ ರೀತಿ ಮಕ್ಕಳಿಗೆ ಚೆಂಡು ಒದಗಿಸುವ ಪ್ರಯತ್ನವು ಅಂತಾರಾಷ್ಟ್ರೀಯ ವಿದ್ಯಮಾನವಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಈ ಕುರಿತು IndiaToday. In ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಅಭಿಜಿತ್ ಭಟ್ಟಾಚಾರ್ಯ, "ನಾವು 100 ಚೆಂಡನ್ನು ಸಂಗ್ರಹಿಸುವ ಯೋಜನೆಯೊಂದಿಗೆ ಪ್ರಾರಂಭಿಸಿದೆವು. ಅದನ್ನು ಅಸ್ಸಾಂ ವಾಲಿಬಾಲ್ ಮಿಷನ್ 100 ಎಂದು ಕರೆಯಲಾಯಿತು" ಎಂದು ತಿಳಿಸಿದ್ದಾರೆ.

"ಮಕ್ಕಳಿಗೆ ಚೆಂಡನ್ನು ಒದಗಿಸಿದ ನಂತರ, ಅವರಿಗೆ ತರಬೇತಿ ನೀಡುವ ಯೋಜನೆಯಾಗಿ ರೂಪಾಂತರಗೊಂಡಿತು. ಹಾಗೆ ತರಬೇತುಗೊಂಡ ಮಕ್ಕಳು ತಮ್ಮ ಕೌಶಲವನ್ನು ಪ್ರದರ್ಶಿಸಬೇಕಿತ್ತು. ಹೀಗಾಗಿ, ಬ್ರಹ್ಮಪುತ್ರ ವಾಲಿಬಾಲ್ ಲೀಗ್ ಜನ್ಮ ತಳೆಯಿತು" ಎಂದು ಅವರು ಹೇಳುತ್ತಾರೆ.

ಈ ಯೋಜನೆಯ ಹಿಂದಿನ ಉದ್ದೇಶ ಮಕ್ಕಳನ್ನು ಆಡುವಂತೆ ಮಾಡುವುದು ಹಾಗೂ ಅವರ ಶಕ್ತಿಯನ್ನು ಸಕಾರಾತ್ಮಕವಾಗಿ ವಿಸ್ತರಿಸುವುದಾಗಿತ್ತು. ಹೆಚ್ಚು ವಿದ್ಯಾಭ್ಯಾಸವಿಲ್ಲದ ಮಕ್ಕಳು ಕ್ರೀಡೆಯನ್ನು ಉದ್ಯೋಗ ಗಿಟ್ಟಿಸಲು ಬಳಸಿಕೊಳ್ಳಬಹುದು ಎಂಬುದು ಅಭಿಜಿತ್ ಭಟ್ಟಾಚಾರ್ಯರ ಹಂಚಿಕೆಯೂ ಆಗಿತ್ತು.

ಬ್ರಹ್ಮಪುತ್ರ ವಾಲಿಬಾಲ್ ಲೀಗ್ ಹೇಗೆ ಪರಿವರ್ತನಾಶೀಲವಾಗಿದೆ ಎಂಬುದರ ಕುರಿತು ಹಲವಾರು ಗ್ರಾಮಸ್ಥರು ಮಾಹಿತಿ ನೀಡಿದ್ದು, ಹದಿಹರೆಯದ ಯುವಕರು ತಂಬಾಕು ಜಗಿಯುವುದನ್ನು ಕೈಬಿಟ್ಟು, ವಾಲಿಬಾಲ್‌ನತ್ತ ಗಮನ ಕೇಂದ್ರೀಕರಿಸಿದ್ದಾರೆ ಎಂದು ಹೇಳಿದ್ದಾರೆ. ನಿಜ ಹೇಳಬೇಕೆಂದರೆ, ಗ್ರಾಮಸ್ಥರೇ ಬ್ರಹ್ಮಪುತ್ರ ವಾಲಿಬಾಲ್ ಲೀಗ್‌ನ ಬೆನ್ನೆಲುಬಾಗಿದ್ದಾರೆ.

ಗ್ರಾಮಸ್ಥರೇ ಮೈದಾನವನ್ನು ಸಿದ್ಧಪಡಿಸಿ, ಸಮರ್ಪಕ ಬೆಳಕನ್ನು ಖಾತರಿಗೊಳಿಸಿ ಮಕ್ಕಳಿಗೆ ನಿಯಮಿತವಾಗಿ ಅಭ್ಯಾಸ ನಡೆಸುವಂತೆ ಉತ್ತೇಜನ ನೀಡುತ್ತಿದ್ದಾರೆ. ಇದರೊಂದಿಗೆ ಬ್ರಹ್ಮಪುತ್ರ ವಾಲಿಬಾಲ್ ಲೀಗ್ ಪಂದ್ಯಾವಳಿಯ ಸಂದರ್ಭದಲ್ಲಿ ಇತರ ಗ್ರಾಮದ ತಂಡಗಳಿಗೆ ಆತಿಥ್ಯವನ್ನೂ ಒದಗಿಸುತ್ತಿದ್ದಾರೆ. ವಾಸ್ತವವಾಗಿ ಗ್ರಾಮದ ಪ್ರತಿಷ್ಠೆಯು ಇಲ್ಲಿ ಕೆಲಸ ಮಾಡುತ್ತಿದೆ.

ಇದು ವಾಲಿಬಾಲ್‌ನ ಶಕ್ತಿಯಾಗಿದ್ದು, ಬ್ರಹ್ಮಪುತ್ರ ವಾಲಿಬಾಲ್ ಲೀಗ್ ಅದನ್ನು ಬಡಿದೆಬ್ಬಿಸುತ್ತಿದೆ. ಆ ಮೂಲಕ ದೈವ ಬಲ ಕಡಿಮೆ ಇರುವ ಮಕ್ಕಳಿಗೆ ಇಡೀ ಜಗತ್ತನ್ನು ತೆರೆಯುತ್ತಿದೆ.

ಸೌಜನ್ಯ: indiatoday.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News