ಗುರುಗ್ರಾಮ: ಕರ್ತವ್ಯವಿದೆ ಎಂದು ಊರಿಗೆ ಹೋಗಲು ನಿರಾಕರಿಸಿದ್ದ ಇಮಾಂ ಗಲಭೆಗೆ ಬಲಿ!
ಸೀತಾಮರ್ಹಿ: ಗುರುಗ್ರಾಮದ ಮಸೀದಿ ಮೇಲೆ ದುಷ್ಕರ್ಮಿಗಳ ಗುಂಪು ನಡೆಸಿದ ದಾಳಿಯಲ್ಲಿ ಮೃತಪಟ್ಟ ಇಮಾಮ್ 19 ವರ್ಷದ ಹಾಫಿಝ್ ಸಾದ್ ಹಿಂದಿನ ದಿನವೇ ಊರಿಗೆ ರೈಲಿನಲ್ಲಿ ತನ್ನ ಹಿರಿಯ ಸಹೋದರ ಶದಬ್‌ನೊಂದಿಗೆ ತೆರಳಬೇಕಿದ್ದರೂ ಊರಿನಲ್ಲಿಲ್ಲದ ಮಸೀದಿಯ ಮುಖ್ಯ ಇಮಾಮ್ ಗುರುವಾರ ಬರುವ ತನಕವೂ ಮಸೀದಿಯಲ್ಲಿರುವುದು ತನ್ನ ಕರ್ತವ್ಯ ಎಂದು ಅಲ್ಲಿಯೇ ಉಳಿದು ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಅವರ ಸೋದರ ಮಾವ ಇಬ್ರಾಹಿಂ ಅಖ್ತರ್ ಹೇಳಿದ್ದಾರೆ.
ಹಫೀಝ್ ಸಾದ್ ಅವರ ಹುಟ್ಟೂರಾದ ಬಿಹಾರದ ಸೀತಾಮರ್ಹಿ ಜಿಲ್ಲೆಯ ಮನಿಯದಿಹ್ ಗ್ರಾಮದಲ್ಲಿ ಜನರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
ಹಫೀಝ್ ಅವರ ಹಿರಿಯ ಸಹೋದರ ಗುರುಗ್ರಾಮದಲ್ಲಿ ಟ್ಯೂಷನ್ ನೀಡುತ್ತಿದ್ದು ಅಲ್ಲಿನ ಪರಿಸ್ಥಿತಿಯನ್ನು ನೋಡಿ ಊರಿಗೆ ಹಿಂತಿರುಗಲು ಮನಸ್ಸು ಮಾಡಿದ್ದರೂ ತನ್ನ ಕಿರಿಯ ಸಹೋದರನಿಗೆ ಕರ್ತವ್ಯವೇ ಮಿಗಿಲಾಗಿತ್ತು ಎಂದು ಅವರು ಹೇಳುತ್ತಾರೆ.
ಮೃತ ಇಮಾಂ ತಂದೆ ಮುಶ್ತಾಖ್ ತಮ್ಮ ಮಗನ ಸಾವಿನ ಹಿಂದೆ ಸಂಚಿರಬಹುದು ಎಂದು ಶಂಕಿಸುತ್ತಾರಲ್ಲದೆ ತಮ್ಮ 19 ವರ್ಷದ ಪುತ್ರನ ಮೇಲೆ ಕತ್ತಿಗಳಿಂದ ದಾಳಿ ನಡೆಸಿ ನಂತರ ಗುಂಡಿಕ್ಕಿ ಸಾಯಿಸಲಾಗಿದೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದು ಅವರಿಗೆ ಸಾಧ್ಯವಿಲ್ಲದಂತಾಗಿದೆ.