ಹಿಮಾಚಲ ಪ್ರದೇಶ | ಶಿಮ್ಲಾ, ಕುಲ್ಲು, ಮಂಡಿಯಲ್ಲಿ ಮೇಘ ಸ್ಫೋಟ

Update: 2024-08-03 17:23 GMT

Photo: PTI

ಶಿಮ್ಲಾ : ಹಿಮಾಚಲಪ್ರದೇಶದ ಶಿಮ್ಲಾ, ಕುಲ್ಲು ಹಾಗೂ ಮಂಡಿ ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಹಲವು ಮೇಘ ಸ್ಫೋಟಗಳಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಕನಿಷ್ಠ 50 ಜನರು ನಾಪತ್ತೆಯಾಗಿದ್ದಾರೆ.

ಈ ಮೇಘ ಸ್ಫೋಟಗಳಿಂದ ಮೂರು ಜಿಲ್ಲೆಗಳಲ್ಲಿ ವ್ಯಾಪಕ ನಾಶ ಉಂಟಾಗಿದೆ. ಹಲವು ಮನೆ, ಶಾಲೆ ಹಾಗೂ ಆಸ್ಪತ್ರೆಗಳಿಗೆ ಹಾನಿ ಉಂಟಾಗಿದೆ. ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ. ಕುಲ್ಲು ಹಾಗೂ ಮಂಡಿಯಲ್ಲಿರುವ ಎಲ್ಲಾ ಶಾಲೆ ಹಾಗೂ ಕಾಲೇಜುಗಳಿಗೆ ಆಡಳಿತ ರಜೆ ಘೋಷಿಸಿದೆ.

ಮಾದ್ಯಮದಲ್ಲಿ ಸಂತ್ರಸ್ತರ ಸಂಖ್ಯೆಯನ್ನು ಹಂಚಿಕೊಂಡ ಹಿಮಾಚಲಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಎಲ್ಲಾ ಅಗತ್ಯದ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

‘‘ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಡಿಸಿ ಹಾಗೂ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ. ನಾವು ಎಲ್ಲಾ ರೀತಿಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಸೇನೆಯ ನೆರವನ್ನು ಕೂಡ ಕೋರಿದ್ದೇವೆ. ಕಾಲುವೆ ಹಾಗೂ ನದಿಗಳ ಸಮೀಪ ಹೋಗದಂತೆ ಜನರಲ್ಲಿ ಮನವಿ ಮಾಡಿದ್ದೇವೆ. ವಾಯು ಪಡೆಗೆ ಸಿದ್ಧವಾಗಿರಲು ಮನವಿ ಮಾಡಿದ್ದೇವೆ’’ ಎಂದು ಅವರು ಹೇಳಿದ್ದಾರೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ರಸ್ತೆ ಹಾಗೂ ಮೂಲಭೂತ ಸೌಕರ್ಯಕಗಳಿಗೆ ಹಾನಿ ಉಂಟಾಗಿದೆ. ಮನಾಲಿ ಸಂಪರ್ಕ ಕಡಿದುಕೊಂಡಿದೆ ಎಂದು ಸುಖು ತಿಳಿಸಿದ್ದಾರೆ.

ಮಣಿಕರ್ಣ-ಭುಂಟರ್ ರಸ್ತೆಯಲ್ಲಿ ತರಕಾರಿ ಮಾರುಕಟ್ಟೆ ಇರುವ ಕಟ್ಟಡ ಕುಸಿದಿರುವುದನ್ನು ವೀಡಿಯೊವೊಂದು ತೋರಿಸಿದೆ.

ಬೇಸಗೆ ರಾಜಧಾನಿಯಾಗಿರುವ ಶಿಮ್ಲಾದ ಸಮೇಜ್ ಖಾದ್‌ನಲ್ಲಿರುವ ಜಲ ವಿದ್ಯುತ್ ಶಕ್ತಿ ಯೋಜನೆ ಸಮೀಪ ಮೇಘ ಸ್ಫೋಟ ಸಂಭವಿಸಿದ ಬಳಿಕ ಕನಿಷ್ಟ 20 ಮಂದಿ ನಾಪತ್ತೆಯಾಗಿದ್ದಾರೆ. ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿದೆ. ಜಿಲ್ಲಾಧಿಕಾರಿ ಅನುಪಮ್ ಕಶ್ಯಪ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠ ಸಂಜೀವ್ ಗಾಂಧಿ ಸೇರಿದಂತೆ ಅಧಿಕಾರಿಗಳನ್ನು ಒಳಗೊಂಡ ತಂಡ ಕೂಡ ಸ್ಥಳಕ್ಕೆ ತೆರಳಿದೆ.

‘‘ನಾವು ಸ್ವೀಕರಿಸಿದ ಮಾಹಿತಿ ಪ್ರಕಾರ ಮೇಘ ಸ್ಫೋಟ ಸಂತ್ರಸ್ತ ಪ್ರದೇಶದಿಂದ 20 ಜನರು ನಾಪತ್ತೆಯಾಗಿದ್ದಾರೆ’’ ಎಂದು ಕಶ್ಯಪ್ ತಿಳಿಸಿದ್ದಾರೆ. ಮೇಘ ಸ್ಫೋಟ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿಯಲು ಕಾರಣವಾಗಿದೆ. ರಕ್ಷಣಾ ತಂಡಗಳು ಪೀಡಿತ ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ತಲುಪಲು ಪ್ರಯತ್ನಿಸುತ್ತಿವೆ.

ಶಿಮ್ಲಾದಿಂದ ಸುಮಾರು 125 ಕಿ.ಮೀ. ದೂರದಲ್ಲಿರುವ ಮಂಡಿಯಲ್ಲಿ ಕೂಡ ಮೇಘ ಸ್ಫೋಟ ಸಂಭವಿಸಿದೆ. ಮುಹಾಲ ತೆರಂಗಾ ಸಮೀಪದ ರಾಜ್‌ಬನ್ ಗ್ರಾಮದಲ್ಲಿ ಸಂಭವಿಸಿದ ಮೇಘ ಸ್ಫೋಟದಿಂದ ರಸ್ತೆ ತಡೆ ಹಾಗೂ ಭೂಕುಸಿತ ಉಂಟಾಗಿದೆ ಎಂದು ಮಂಡಿಯ ಜಿಲ್ಲಾಧಿಕಾರಿ ಅಪೂರ್ವ ದೇವಗನ್ ತಿಳಿಸಿದ್ದಾರೆ.

ಮೇಘ ಸ್ಫೋಟದ ಹಿನ್ನೆಲೆಯಲ್ಲಿ ಪಾಧರ್ ಉಪವಿಭಾಗದ ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ವೊಕೇಶನಲ್ ತರಬೇತು ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಂಡಿ ಪರಿಸ್ಥಿತಿಯನ್ನು ಹತ್ತಿರದಿಂದ ಪರಿಶೀಲಿಸುತ್ತಿದ್ದಾರೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ನೆರವನ್ನು ಒದಗಿಸುವಂತೆ ಅವರು ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News